ಪುತ್ತೂರು: ಮಂಗಳೂರಿನಿಂದ ತಮಿಳುನಾಡಿಗೆ ಕಾಲ್ನಡಿಗೆಯಲ್ಲಿ ಹೊರಟ 8 ಮಂದಿಯನ್ನು ಪುತ್ತೂರು ಪೊಲೀಸರು ನಗರದ ಹೊರವಲಯದ ಕಬಕದಲ್ಲಿ ತಡೆದು ಪುತ್ತೂರು ತಹಶೀಲ್ದಾರ್ ನೇತೃತ್ವದಲ್ಲಿ 15 ದಿನಗಳ ದಿನಸಿ ಮತ್ತೆ ಮಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ.
ಆರು ವರ್ಷಗಳಿಂದ ಮಂಗಳೂರು ಮೀನುಗಾರಿಕೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 8 ಮಂದಿ ಲಾಕ್ಡೌನ್ನಿಂದಾಗಿ ಕೆಲಸ ಸ್ಥಗಿತಗೊಂಡ ಕಾರಣ ತಮ್ಮ ಊರಾದ ತಮಿಳುನಾಡಿನ ಕಲ್ಲಕುರ್ಚಿ ಎಂಬಲ್ಲಿಗೆ ಕಾಲ್ನಡಿಗೆ ಮೂಲಕವೇ ಹೊರಟಿದ್ದರು.
ಮಂಗಳೂರಿನಿಂದ ಪುತ್ತೂರು ಮೂಲಕ ಮೈಸೂರು ತಲುಪಿ ಅಲ್ಲಿಂದ ತಮಿಳುನಾಡಿಗೆ ಹೋಗುವ ಉದ್ದೇಶ ಅವರದ್ದಾಗಿತ್ತು. ಪುತ್ತೂರಿನ ಕಬಕದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಊರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಪುತ್ತೂರು ಮಿನಿ ವಿಧಾನಸೌಧಕ್ಕೆ ಕರೆತರಲಾಯಿತು.
ತಹಶೀಲ್ದಾರ್ ರಮೇಶ್ ಬಾಬು ಅವರ ಮಾರ್ಗದರ್ಶನದಂತೆ ದಿನಸಿ ನೀಡಿ ಮತ್ತೆ ಮಂಗಳೂರಿನ ಅವರ ಮನೆಗಳಿಗೆ ವಾಹನಗಳ ಮೂಲಕ ಕಳುಹಿಸಿಕೊಟ್ಟರು.
ಮಂಗಳೂರಿನಲ್ಲಿ ಊಟಕ್ಕೆ ಸಮಸ್ಯೆ ಇಲ್ಲದಿದ್ದರೂ ಕೆಲಸ ಇಲ್ಲದೇ ಇರುವ ಕಾರಣ ನಮ್ಮೂರಿಗೆ ಹೊರಟಿದ್ದೆವು ಎಂದು 8 ಮಂದಿ ಅಳಲು ತೋಡಿಕೊಂಡರು. ತಮಿಳುನಾಡಿಗೆ ಈಗ ಹೋಗುವ ಹಾಗಿಲ್ಲ. ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. 15 ದಿನಗಳಿಗೆ ಬೇಕಾದ ದಿನಸಿ ಆಹಾರ ವಸ್ತುಗಳನ್ನು ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.