ಮಂಗಳೂರು: ದ.ಕ.ಜಿಲ್ಲೆಯಲ್ಲಿ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆ ಆಗುತ್ತಿದೆ. ಇಂದು ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಆದರೆ 18 ವರ್ಷದೊಳಗಿನವರಿಗೆ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ ಅಂಗಡಿಗಳು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮಕ್ಕಳನ್ನು ಕರೆದೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಹವಾನಿಯಂತ್ರಿತ ಅಂಗಡಿಗಳು, ಶಾಪಿಂಗ್ ಮಾಲ್, ಹವಾನಿಯಂತ್ರಿತ ಶಾಪಿಂಗ್ ಸಂಕೀರ್ಣಗಳು ತೆರೆಯಲು ಅವಕಾಶವಿಲ್ಲ. ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಅದೇ ರೀತಿ ಜಿಲ್ಲೆಯೊಳಗೆ ವಾರಾಂತ್ಯ ಕರ್ಫ್ಯೂವನ್ನು ಹೊರತುಪಡಿಸಿ ಉಳಿದಂತೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಬಸ್ ಸಂಚಾರಕ್ಕೆ ಅನುಮತಿಸಲಾಗಿದೆ. ಆದರೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು 50% ಪ್ರಯಾಣಿಕರೊಂದಿಗೆ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಈ ತಿಂಗಳಾಂತ್ಯದವರೆಗೂ ಖಾಸಗಿ ಬಸ್ ಓಡಿಸಲ್ಲ:
ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದರೂ ಈ ತಿಂಗಳಾಂತ್ಯದವರೆಗೆ ಬಸ್ ಓಡಿಸದಿರಲು ಖಾಸಗಿ ಬಸ್ ಮಾಲಕರು ನಿರ್ಧರಿಸಿದ್ದಾರೆ. ಈ ಕುರಿತು ಮಾತನಾಡಿದ ಮಂಗಳೂರು ನಗರ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ, 'ಜಿಲ್ಲೆಯಲ್ಲಿ ಬಸ್ ಓಡಾಟ ನಡೆಸುವ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಲಾಗಿಲ್ಲ. ಏಕಾಏಕಿ ಬಸ್ ಓಡಾಟಕ್ಕೆ ಅವಕಾಶ ನೀಡಿದರೆ ಬಸ್ ಓಡಾಟ ಮಾಡಲು ಅಸಾಧ್ಯ. ಎರಡು ತಿಂಗಳು ಬಸ್ ಓಡಿಸದೆ ಇರುವುದರಿಂದ ಇದರ ನಿರ್ವಹಣೆ ಮಾಡಬೇಕಾಗಿದೆ. ತಿಂಗಳ ಮಧ್ಯೆ ಬಸ್ ಓಡಿಸಿದ್ರೆ ತೆರಿಗೆ ಸೇರಿದಂತೆ ಇತರ ಆರ್ಥಿಕ ಹೊರೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ತಿಂಗಳಾಂತ್ಯದವರೆಗೆ ಬಸ್ ಓಡಿಸಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.