ಪುತ್ತೂರು (ಮಂಗಳೂರು): ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಸಹಿತ ಸಿಬ್ಬಂದಿಗೆ ಸಂಬಳ ನೀಡದೆ ಕೆಲಸದಿಂದ ಕೈಬಿಡುತ್ತಿರುವುದು ಸರಿಯಲ್ಲ. ಸರ್ಕಾರ ತಕ್ಷಣ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಿಸಿ ನೌಕರರಿಗೆ ರಕ್ಷಣೆ ನೀಡಬೇಕು ಎಂದು ಕಮ್ಯುನಿಸ್ಟ್ ನಾಯಕ, ನ್ಯಾಯವಾದಿ ಬಿ.ಎಂ.ಭಟ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾತ್ಕಾಲಿಕ, ಗೌರವ ನೆಲೆಯಲ್ಲಿ ಹಲವು ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ಲಾಕ್‌ಡೌನ್ ಹಿನ್ನಲೆ ವೇತನ ನೀಡದೆ ಶೋಷಣೆ ಮಾಡುತ್ತಿರುವುದು ಸರ್ಕಾರಕ್ಕೆ ಕಳಂಕ ತಂದಿದೆ.
ಆದ್ದರಿಂದ ಈ ಎಲ್ಲಾ ನೌಕರರು, ಶಿಕ್ಷಕರನ್ನು ಕೆಲಸದಲ್ಲೇ ಉಳಿಸಬೇಕು. ಅವರಿಗೆ ಕೊಡಬೇಕಾದ ಸಂಬಳ ನೀಡಬೇಕು. ಅಲ್ಲದೆ ಲಾಕ್‌ಡೌನ್‌ನಿಂದ ಸಮಸ್ಯೆಗೊಳಗಾದವರಿಗೆ ಶಿಕ್ಷಣ ಸಂಸ್ಥೆಗಳ ಮಾಲೀಕರಿಂದ ಪರಿಹಾರ ಪ್ಯಾಕೇಜ್ ಕೊಡಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.