ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಕೆರೆಕೋಡಿ ಬಳಿಯ ಸುಂದರ ಆಚಾರ್ಯ ಎನ್ನುವರ ಮನೆ ಬಳಿ ದೊಡ್ಡ ಗಾತ್ರದ ಉಡವೊಂದು ಬಂದಿದ್ದು, ಇದು ಮನೆಯವರನ್ನು ಹಾಗೂ ಊರವರಲ್ಲಿ ಅಚ್ಚರಿ ಉಂಟುಮಾಡಿದೆ.
ಸವಣಾಲು ಬಳಿ ಮನೆಯ ಆಸುಪಾಸು ಸಾಮಾನ್ಯವಾಗಿ ಸಣ್ಣ ಗಾತ್ರದ ಉಡಗಳು ಕಾಣಸಿಗುತ್ತವೆ. ಆದರೆ ಈ ಬಾರಿ ದೊಡ್ಡ ಗಾತ್ರದ ಉಡ ಕಂಡುಬಂದಿದ್ದು, ಇಲ್ಲಿಯವರೆಗೆ ಇಷ್ಟು ದೊಡ್ಡ ಉಡವನ್ನು ನೋಡಿಲ್ಲ ಎಂದು ಸುಂದರ ಆಚಾರ್ಯ ಮನೆಯವರು ತಿಳಿಸಿದ್ದಾರೆ.
ಅ.31ರಂದು ಮಧ್ಯಾಹ್ನ ಒಮ್ಮೆ ಇವರ ಮನೆಯ ಬಳಿಗೆ ಬಂದಿದ್ದು, ಬಳಿಕ ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಸುಂದರ ಆಚಾರ್ಯ ಅವರ ಮನೆಯ ಬಳಿ ಸುಳಿದಾಡಿದೆ. ಈ ಸಂದರ್ಭ ಸುಂದರ ಆಚಾರ್ಯ ಅವರ ಪುತ್ರ ರವಿ ಆಚಾರ್ಯ ಅವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.
ಏಪ್ರಿಲ್‍ನಿಂದ ಅಕ್ಟೋಬರ್ ಇವುಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ಹೆಣ್ಣು ಉಡವು ಮಣ್ಣನ್ನು ತೋಡಿ ಮೊಟ್ಟೆ ಇಡುತ್ತವೆ. ಆದ್ದರಿಂದ ಈ ಉಡ ಮೊಟ್ಟೆ ಇಡಲು ಸುರಕ್ಷಿತ ಜಾಗವನ್ನು ಅರಸಿ ಮನೆಯ ಬಳಿ ಸುಳಿದಾಡಿದೆ ಎನ್ನಲಾಗ್ತಿದೆ. ಸವಣಾಲಿನಲ್ಲಿ ಕಂಡು ಬಂದ ದೊಡ್ಡ ಗಾತ್ರದ ಉಡ ಇದಾಗಿದೆ. ಅಳಿವಿನಂಚಿನಲ್ಲಿರುವ ಈ ಜೀವಿಯನ್ನು ಜನತೆ ಕೊಲ್ಲದೆ, ರಕ್ಷಿಸಬೇಕಿದೆ.