ಸುಳ್ಯ (ದಕ್ಷಿಣ ಕನ್ನಡ): ಕೇರಳದ ಕಲಮಶೇರಿಯ ಪ್ರಾರ್ಥನಾ ಹಾಲ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಮಂಗಳೂರು ನಗರ ಕೇಂದ್ರ ಭಾಗ ಸೇರಿದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಆಯಕಟ್ಟಿನ ಸ್ಥಳಗಳಲ್ಲಿ ಸೋಮವಾರ ಕೂಡಾ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ವಿಮಾನ ನಿಲ್ದಾಣ, ಬಂದರು, ಧಾರ್ಮಿಕ ಕ್ಷೇತ್ರಗಳು, ತೀರ ಪ್ರದೇಶಗಳು, ರೈಲ್ವೇ ನಿಲ್ದಾಣಗಳು ಸೇರಿದಂತೆ ಹಲವು ಕಡೆಗಳಲ್ಲಿ ಕಣ್ಗಾವಲು ಕಂಡುಬಂತು.
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪೊಲೀಸರು ಕೇರಳ ಕರ್ನಾಟಕದ ಗಡಿ ಚೆಕ್ ಪಾಯಿಂಟ್‌ಗಳ ಮೂಲಕ ಕೇರಳಕ್ಕೆ ಮತ್ತು ಕರ್ನಾಟಕಕ್ಕೆ ಪ್ರವೇಶಿಸುವ ವಾಹನಗಳ ತಪಾಸಣೆಯನ್ನು ಹಲವು ಕಡೆಗಳಲ್ಲಿ ಮುಂದುವರೆಸಿದ್ದಾರೆ. ಸುಳ್ಯ ವ್ಯಾಪ್ತಿಯ ಸಂಪಾಜೆ, ಜಾಲ್ಸೂರು, ಮಂಡೆಕೋಲು ಮುರೂರು, ಮಂಜೇಶ್ವರ, ಉಳ್ಳಾಲ ವ್ಯಾಪ್ತಿಯ ತಲಪಾಡಿ, ತಚ್ಚಾಣಿ, ದೇವಿಪುರ ಗಡಿಭಾಗದಲ್ಲಿ ಚೆಕ್ ಪಾಯಿಂಟ್‌ಗಳನ್ನು ಹಾಕಲಾಗಿದ್ದು, ಕೊಣಾಜೆ ವ್ಯಾಪ್ತಿಯ ಮುದುಂಗಾರುಕಟ್ಟೆ, ನಾರ್ಯ, ನಂದರಪಡ್ಪು, ತೌಡುಗೋಳಿ ಕ್ರಾಸ್, ನೆತ್ತಿಲಪದವು ಗಡಿಭಾಗದಲ್ಲಿ ಮತ್ತು ಕೊಡಗು ಭಾಗದ ಚೆಕ್‌ಪಾಯಿಂಟ್‌ಗಳ ಮೂಲಕ ಕರ್ನಾಟಕ ಒಳಬರುವ ವಾಹನಗಳು ಮತ್ತು ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಯ ಬಹುತೇಕ ಎಲ್ಲಾ ಚರ್ಚ್‌ಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಈಗಾಗಲೇ ಸಿ.ಸಿ ಕ್ಯಾಮರಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಹಲವು ಕ್ರೈಸ್ತ ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಉಳ್ಳಾಲ ವ್ಯಾಪ್ತಿಯ ಪೆರ್ಮನ್ನೂರು, ತೊಕ್ಕೊಟ್ಟು ಡಿವೈನ್ ಕೇಂದ್ರ, ಚೆಂಬುಗುಡ್ಡೆ ಪ್ರಾರ್ಥನಾ ಕೇಂದ್ರ, ಬಬ್ಬುಕಟ್ಟೆ, ಪಾನೀರು, ರಾಣಿಪುರ ಚರ್ಚ್‌ಗಳಿಗೆ ಭದ್ರತೆ ಏರ್ಪಡಿಸಲಾಗಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು, ಪಜೀರು, ಎಲಿಯಾರ್ ಪದವು, ಮುಡಿಪು ಬೆಟ್ಟದಲಿರುವ ಚರ್ಚ್‌ಗಳಿಗೆ ಭದ್ರತೆ ನೀಡಲಾಗಿದೆ. ಇದರೊಂದಿಗೆ ಉಳ್ಳಾಲ, ಸೋಮೇಶ್ವರ ಬೀಚ್ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಪೊಲೀಸ್ ಗಸ್ತುಪಡೆ ಕಾರ್ಯ ನಿರ್ವಹಿಸುತ್ತಿದೆ. ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ಸ್ಕ್ವಾಡ್, ಆರ್‌ಪಿಎಫ್, ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ತಪಾಸಣೆ ಮಾಡಲಾಗಿದೆ. ಹಲವು ಬಸ್ ನಿಲ್ದಾಣಗಳಲ್ಲಿ ಸಹಿತ ಪೊಲೀಸ್ ಭದ್ರತೆ ಬಿಗುಗೊಳಿಸಲಾಗಿದೆ.
ಕೇರಳದ ಕಲಮಶೇರಿ ಸ್ಪೋಟದ ಆರೋಪಿಯ ಬಂಧನವಾಗಿದ್ದು, ಉನ್ನತ ಮಟ್ಟದ ತನಿಖೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿನ ತಪಾಸಣೆ ಮತ್ತು ಭದ್ರತೆ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಕೇರಳದಲ್ಲಿ ಭೀಕರ ಸ್ಫೋಟ ಹಿನ್ನೆಲೆ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ಗೆ ಸೂಚನೆ: ಗೃಹ ಸಚಿವ ಡಾ. ಜಿ ಪರಮೇಶ್ವರ್