ಕಡಬ/ಮಂಗಳೂರು: ಕಡಬ ಗ್ರಾಮ ಪಂಚಾಯತ್ ನಿಂದ ಅಧಿಕೃತವಾದ ಅನುಮತಿ ಪಡೆಯದೇ ಗ್ರಾ.ಪಂ. ಸಭಾಂಗಣದೊಳಗೆ ಕೆಸಿಸಿ ಆರೋಗ್ಯ ಕಾರ್ಡ್ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದ ನೋಂದಣಿ ಪ್ರತಿನಿಧಿಯನ್ನು ಜನ ತರಾಟೆಗೆ ತೆಗೆದುಕೊಂಡು, ಪೊಲೀಸರಿಗೊಪ್ಪಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಇದೇ ವೇಳೆ ಕಡಬ ತಾಲೂಕು ರೈತ ಸಂಘದ ಮುಖಂಡ ವಿಕ್ಟರ್ ಮಾರ್ಟಿಸ್ ಅವರು ಸ್ಥಳಕ್ಕೆ ಆಗಮಿಸಿ ಕಾರ್ಡ್ ನೋಂದಣಿ ಪ್ರತಿನಿಧಿಗೆ ಬಿಸಿ ಮುಟ್ಟಿಸಿದರು.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಕೆ.ಸಿ.ಸಿ ಆರೋಗ್ಯ ಕಾರ್ಡ್ಗೆ ಸರ್ಕಾರದಿಂದ ಯಾವುದೇ ಮಾನ್ಯತೆ ಇಲ್ಲ. ಆಯುಷ್ಮಾನ್ ಭಾರತ ಕಾರ್ಡ್ ಮಾತ್ರ ಅಧಿಕೃತ ಎಂದಿದ್ದಾರೆ.
ಕಡಬ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಕೆಸಿಸಿ ಪ್ರತಿನಿಧಿಯನ್ನು ವಶಕ್ಕೆ ತೆಗೆದುಕೊಂಡು, ಬಳಿಕ ದಾಖಲೆ ಸಮೇತ ನಾಳೆ ಠಾಣೆಗೆ ಬರುವಂತೆ ಹೇಳಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.