ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರಕ್ಕೆ ಸಂಬಂಧಿಸಿ ಎಲ್ಲಾ ವಿಚಾರಗಳನ್ನು ಹಿರಿಯ ನಾಯಕ ಜನಾರ್ದನ ಪೂಜಾರಿಯವರಿಗೆ ಮನವರಿಕೆ ಮಾಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರು ನಾನು ಹಾಗೂ ಸಚಿವ ಸುನೀಲ್ ಕುಮಾರ್ ರಾಜೀನಾಮೆ ನೀಡುವಂತೆ ಹೇಳಿದ್ದಾರೆ. ನನಗೆ ಐವನ್ ಡಿಸೋಜರ ಹೇಳಿಕೆಗೆ ಪ್ರತಿಕ್ರಿಯೆ ಕೊಡಬೇಕೆಂದು ಅನಿಸಿಲ್ಲ ಎಂದರು.
ನಾರಾಯಣ ಗುರುಗಳು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದ್ದಾರೆ. ಮೈಸೂರು ದಸರಾ ಬಿಟ್ಟರೆ ರಾಜ್ಯದಲ್ಲಿ ಅತ್ಯಂತ ದೊಡ್ಡ ಮಟ್ಟದ ದಸರಾ ಮಹೋತ್ಸವ ಕುದ್ರೋಳಿಯಲ್ಲಿ ನಡೆಯುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ದಸರಾ ಮಹೋತ್ಸವ ಉದ್ಘಾಟನೆಗೆ ಜನಾರ್ದನ ಪೂಜಾರಿ ಕರೆದಿದ್ದರು. ಆದರೆ ಅಂದು ದ.ಕ.ಜಿಲ್ಲೆಯಲ್ಲಿದ್ದರೂ ಕೂಡ ಸಿದ್ದರಾಮಯ್ಯ ಕುದ್ರೋಳಿಗೆ ಬಂದಿರಲಿಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂದು ಐವನ್ ಡಿಸೋಜ ಅವರನ್ನೇ ಕೇಳಬೇಕು ಎಂದು ಟಾಂಗ್ ನೀಡಿದರು.
ಸ್ತಬ್ಧಚಿತ್ರ ವಿವಾದದ ಬಗ್ಗೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸುನಿಲ್ ಕುಮಾರ್ ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವನ್ನು ಟೀಕೆ ಮಾಡಲು ಕಾಂಗ್ರೆಸ್ಗೆ ವಿಷಯವಿಲ್ಲ. ಹಾಗಾಗಿ, ಈ ಅಸ್ತ್ರವನ್ನು ಬಳಸಲಾಗುತ್ತಿದೆ. ನರೇಂದ್ರ ಮೋದಿಯವರು ಶಿವಗಿರಿಗೆ ಭೇಟಿ ಕೊಟ್ಟು ನಾರಾಯಣ ಗುರುಗಳಿಗೆ ಗೌರವ ಸಲ್ಲಿಸಿರುವ ಅತ್ಯಂತ ಶ್ರೇಷ್ಠ ಪ್ರಧಾನಿ ಎಂಬ ಭಾವನೆಯಿರುವಾಗ ಇವರ ವಿವಾದ ನಡೆಯುವುದಿಲ್ಲ. ಬಿಜೆಪಿ ಸರ್ಕಾರ ನಾರಾಯಣ ಗುರುಗಳ ಬಗ್ಗೆ ಗೌರವ ಭಾವವನ್ನು ತಳೆದಿದೆ. ಈ ಕುರಿತು ಜನಾರ್ದನ ಪೂಜಾರಿಯವರಿಗೆ ಮನವರಿಕೆ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ