ಮಂಗಳೂರು: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್‌ನಲ್ಲಿ ದೈವಾರಾಧನೆ ವಿಚಾರದಲ್ಲಿ ನಿಂದಿಸಿ ಬರೆಯಲಾಗಿದ್ದು, ಇದನ್ನು ತುಳುವಿನ ಟ್ರೋಲ್ ಪೇಜ್ನವರು ಟ್ರೋಲ್ ಮಾಡಿದ ಬಳಿಕ ವೆಬ್ ಸೈಟ್ ನಲ್ಲಿನ 'ಭೂತ ಕೋಲ' ಪೇಜ್ ಅನ್ನು ಡಿಲೀಟ್ ಮಾಡಲಾಗಿದೆ.
ಭೂತದ ಕೊಳ/ ಭೂತಾರಾಧನೆ ಎಂಬ ತಲೆಬರಹದಲ್ಲಿರುವ ದೈವಾರಾಧನೆ ವಿಚಾರವು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗಿದೆ. ಇಲ್ಲಿ ಭೂತ ಕೋಲ ಎಂಬ ಪದವನ್ನು ಭೂತದ ಕೊಳ ಎಂದು ಬರೆಯಲಾಗಿತ್ತು. ಅಲ್ಲದೆ ಭೂತಾರಾಧನೆಯನ್ನು ದೆವ್ವದ ಆರಾಧನೆ ಎಂದು ಬರೆಯಲಾಗಿತ್ತು.
ಭೂತಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಡ್ರಮ್ ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆ ಮಾಡುತ್ತಾರೆ. ಕತ್ತಿ ಮತ್ತು ಗಂಟೆಗಳೊಂದಿಗೆ ಕುಣಿಯುತ್ತ ನರ್ತಕಿ ತಾನು ಪ್ರತಿನಿಧಿಸುವ ದೆವ್ವದ ಅನುಕರಣೆಯಲ್ಲಿ ಸುತ್ತುತ್ತಾನೆ. ಉದ್ರಿಕ್ತವಾಗಿ ಮೇಲಕ್ಕೆ ಕೆಳಕ್ಕೆ ಹೆಜ್ಜೆ ಹಾಕುತ್ತಾನೆ ಎಂದು ಆಕ್ಷೇಪಾರ್ಹವಾಗಿ ಬರೆಯಲಾಗಿದೆ.
@Tuluvas speaks ಎಂಬ ತುಳುವಿನ ಟ್ರೋಲ್ ಪೇಜ್ ಕರ್ನಾಟಕ ಸರ್ಕಾರದಿಂದ ತುಳುವರ ದೈವಕ್ಕೆ ಅವಮಾನ ಎಂದು ಈ ಬರಹದ ಪೇಜ್ ಅನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಿದೆ. ನಾವು ನಂಬುವ ದೈವಗಳನ್ನು, ಸತ್ಯಗಳನ್ನು ದೆವ್ವಗಳೆಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಅಲ್ಲದೆ ದೆವ್ವ?, ಕತ್ತಿ?, ಕೊಳ?, ಡ್ರಮ್, ನರ್ತಕಿ? ಎಂದು ಆಕ್ಷೇಪವುಳ್ಳ ಪದ ಬಳಕೆಯನ್ನು ಮಾಡಿದೆ. ತುಳುವರನ್ನು ಅರ್ಥ ಮಾಡಿಕೊಳ್ಳದ ರಾಜ್ಯ ಬೇಕೇ ನಮಗೆ ? ಎಂದು ಪ್ರಶ್ನಿಸಿದೆ.
ಈ ಟ್ರೋಲ್ ಪೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಭೂತ ಕೋಲ ಎಂಬ ಪೇಜ್ ಅನ್ನು ಡಿಲೀಟ್ ಮಾಡಿದೆ.
ಇದನ್ನೂ ಓದಿ: ದೈವಾರಾಧನೆ ಕುರಿತು ಅವಮಾನಿಸಿದ ಆರೋಪ: ವಿವಿಧ ಠಾಣೆಗಳಲ್ಲಿ ದೂರು ದಾಖಲು!