ಸುಳ್ಯ (ದಕ್ಷಿಣ ಕನ್ನಡ): ಪಿಎಫ್ಐ ಸಂಘಟನೆಯವರು ಸಿರಿಯಾ, ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಬಂದಿರುವ ಬಗ್ಗೆ ಮಾಹಿತಿ ಇದೆ. ಪಕ್ಷದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕೊಲೆಯನ್ನೂ ಪಿಎಫ್ಐ ಮಾಡಿರುವ ಅನುಮಾನ ಇದೆ. ಪ್ರವೀಣ್ ಅವರನ್ನು ಕೊಲೆ ಮಾಡಲು ಸಹಕಾರ ನೀಡಿ, ಅವರನ್ನು ತೋರಿಸಿಕೊಟ್ಟವರು ಇಲ್ಲಿನ ಜನರೇ ಇರಬಹುದು. ಈ ಕೊಲೆ ಕೇರಳ ಮಾದರಿಯಲ್ಲಿ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಈ ತರಹ ಕೊಲೆ ಮಾಡುವುದು ಪಿಎಫ್ಐ ಮಾತ್ರ. ಪಿಎಫ್ಐಯವರು ಈಗಾಗಲೇ ಸಿರಿಯಾ, ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಬಂದಿದ್ದಾರೆ. ರುದ್ರೇಶ್ ಕೊಲೆಯನ್ನೂ ಇದೇ ಪಿಎಫ್ಐ ಮಾಡಿತ್ತು. ಇದೀಗ ಅವರು ಜೈಲಲ್ಲಿ ಇದ್ದಾರೆ ಎಂದರು.
ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿದೆ. ಅವರು ತನಿಖೆ ಆರಂಭಿಸಿದ್ದಾರೆ. ನಾನು ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಷಯವನ್ನು ಮನವರಿಕೆ ಮಾಡಿ, ಮನವಿ ನೀಡಿದ್ದೇನೆ. ಎನ್ಐಎ ಈಗಾಗಲೇ ತನಿಖೆ ಆರಂಭಿಸಿದೆ. ಕೇರಳದ ತಲಶೇರಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಕೇಸ್: ಹಣದಾಸೆಗೆ ಆರೋಪಿಗಳಿಗೆ ಕಾರು ನೀಡಿದ್ದ ಮಾಲೀಕ ಅರೆಸ್ಟ್