ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಗುಪ್ತಚರ ಘಟಕದ ಅಧಿಕಾರಿಗಳು ದುಬೈನಿಂದ ಬಂದಿಳಿದ ವಿಮಾನದಿಂದ 6 ಚಿನ್ನದ ಬಿಸ್ಕತ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವಿಮಾನವು ದುಬೈ-ಮಂಗಳೂರು-ಹೈದರಾಬಾದ್ ನಡುವೆ ಸಂಚಾರ ನಡೆಸುತ್ತಿದ್ದು, ದುಬೈನಿಂದ ಮಂಗಳೂರು ವರೆಗೆ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು-ಹೈದರಾಬಾದ್ ನಡುವೆ ದೇಶೀಯ ಯಾನವಾಗಿ ಕಾರ್ಯಾಚರಿಸುತ್ತಿದೆ.
ಮಂಗಳೂರಿನಿಂದ ಹೈದರಾಬಾದ್ಗೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೋರ್ವ ಈ ಚಿನ್ನದ ಬಿಸ್ಕತ್ಗಳನ್ನು ವಿಮಾನದ ಸೀಟಿನಡಿಯಲ್ಲಿ ಅಡಗಿಸಿ ತೆಗೆದುಕೊಂಡು ಹೋಗಲು ಯತ್ನಿಸಿದ್ದ ಎನ್ನಲಾಗುತ್ತಿದೆ. ಈತನಿಂದ 33.88 ಲಕ್ಷ ರೂ. ಮೌಲ್ಯದ 671 ಗ್ರಾಂ ತೂಕದ ಒಟ್ಟು 6 ಚಿನ್ನದ ಬಿಸ್ಕತ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದೇಶೀಯ ಯಾನ ಆಗಿರುವುದರಿಂದ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರಲಾರದು ಎಂದು ಭಾವಿಸಿ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.