ಮಂಗಳೂರು: ನರದಲ್ಲಿ ಸೆಪ್ಟೆಂಬರ್ 1ರಿಂದ ಮೀನುಗಾರಿಕೆ ಆರಂಭಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿಸಿದೆ. ಆದರೆ ಹೊರರಾಜ್ಯದ ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯವಾಗಿರುವುದರಿಂದ ಸಂಕಷ್ಟ ತಲೆದೋರಿದಂತಾಗಿದೆ.
ಮಂಗಳೂರಿನ ಬಂದರಿನಲ್ಲಿ ನಡೆಯುತ್ತಿರುವ ಮತ್ಸ್ಯೋದ್ಯಮದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಜಾರ್ಖಾಂಡ್, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ಹೊರ ರಾಜ್ಯಗಳ ಸುಮಾರು 12 ಸಾವಿರಕ್ಕೂ ಅಧಿಕ ಕಾರ್ಮಿಕರು ತೊಡಗಿಕೊಂಡಿದ್ದಾರೆ. ಈ ವಲಸೆ ಕಾರ್ಮಿಕರು ಕೋವಿಡ್ ಲಾಕ್ ಡೌನ್ನಿಂದ ಸಂಕಷ್ಟಕ್ಕೊಳಗಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲೇ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಮೀನುಗಾರಿಕೆ ಇಂತಹ ವಲಸೆ ಕಾರ್ಮಿಕರ ಮೇಲೆಯೇ ಅವಲಂಬಿತವಾಗಿರುವುದರಿಂದ ಇದೀಗ ಇವರು ವಾಪಸ್ ಆದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ.
ಇವರು ಹಂತ ಹಂತವಾಗಿ ಮತ್ತೆ ವಾಪಸ್ ಆದರೂ 14 ದಿನಗಳ ಕ್ವಾರಂಟೈನ್ ಆಗಲೇಬೇಕು. ಹೋಟೆಲ್ ಕ್ವಾರಂಟೈನ್ ದುಬಾರಿಯಾಗಿದ್ದು, ಕ್ವಾರಂಟೈನ್ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಜಿಲ್ಲಾಡಳಿತಕ್ಕೂ ಸಮಸ್ಯೆ ಉಂಟಾಗಿದೆ.
ಇದೀಗ ದೋಣಿಯಲ್ಲಿಯೇ ಕ್ವಾರಂಟೈನ್ಗೆ ವ್ಯವಸ್ಥೆ ಮಾಡುವ ಚಿಂತನೆ ನಡೆಸಿದ್ದರೂ, ಮುಂದಿನ ದಿನಗಳಲ್ಲಿ ಮೀನುಗಾರಿಕೆ ನಡೆಯುವಾಗ ಸಾವಿರಾರು ಮಂದಿ ವ್ಯಾಪಾರ ನಡೆಸುತ್ತಿರುವ ಈ ಕಾರ್ಯಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲ. ಆದ್ದರಿಂದ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತಾ ವ್ಯವಸ್ಥೆಯೊಂದಿಗೆ ಮೀನುಗಾರಿಕೆಯನ್ನು ಆರಂಭಿಸಬೇಕಾದ ಸವಾಲು ಜಿಲ್ಲಾಡಳಿತದ ಮುಂದಿದೆ.