ಮಂಗಳೂರು: ಬರ್ಡ್ ಮಂಗಳೂರು ಎಂಬ ಸಂಸ್ಥೆಯು ನಬಾರ್ಡ್ನ ಅಂಗಸಂಸ್ಥೆಯಾಗಿದ್ದು, ಇದನ್ನು ಮುಖ್ಯವಾಗಿ ಬ್ಯಾಂಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ಷೇತ್ರಗಳ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ಬರ್ಡ್ ಸಂಸ್ಥೆಯ ಜಂಟಿ ನಿರ್ದೇಶಕ ಕೆ.ಲಕ್ಷ್ಮೀನಾರಾಯಣನ್ ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬರ್ಡ್ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತರಬೇತಿ ಸಂಸ್ಥೆಯನ್ನು ಹೊಂದಿದ್ದು, ವಿದೇಶಗಳಲ್ಲಿಯೂ ತರಬೇತಿ ನೀಡುವ ಕಾರ್ಯಕ್ರಮ ಮಾಡುತ್ತಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯು ಪರಿಸರ ಸ್ನೇಹಿ ಕ್ಯಾಂಪಸ್ ಹೊಂದಿದ್ದು, ವಿದ್ಯುತ್ ಉಳಿತಾಯ ಮಾಡಲು ಎಲ್ಲಾ ಕಡೆಗಳಲ್ಲಿಯೂ ಸೌರವಿದ್ಯುತ್ ಸ್ಥಾವರವನ್ನು ಹೊಂದಿದೆ. ಅಲ್ಲದೆ ನಾವು ಪ್ಲಾಸ್ಟಿಕ್ ಗಳನ್ನು ಅತೀ ಕಡಿಮೆ ಮಟ್ಟದಲ್ಲಿ ಬಳಸುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಹಂತಹಂತವಾಗಿ ಪ್ಲಾಸ್ಟಿಕ್ ಬಳಕೆಯನ್ನು ವಿರಳಗೊಳಿಸಿದ್ದೇವೆ. ಮುಂದೆ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮಾಡುವ ಉದ್ದೇಶ ಹೊಂದಿದ್ದೇವೆ. ಅಲ್ಲದೆ ಮುಂದಿನ ಕೆಲವು ತಿಂಗಳೊಳಗೆ ನಮ್ಮ ಕ್ಯಾಂಪಸ್ನಲ್ಲಿ ಮಳೆ ನೀರು ಕೊಯ್ಲಿನ ಮುಖಾಂತರ ಶೇಖರಣೆಯಾಗುವ ನೀರನ್ನು ಬಳಕೆ ಮಾಡುವ ಯೋಜನೆ ಕೈಗೊಂಡಿದ್ದೇವೆ. ಈಗಾಗಲೇ ಮಳೆ ನೀರು ಕೊಯ್ಲಿಗೆ ಬೇಕಾದ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಸಣ್ಣಮಟ್ಟದಲ್ಲಿ ಯೋಜನೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ವ್ಯವಸ್ಥೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.