ಕಡಬ (ದಕ್ಷಿಣ ಕನ್ನಡ): ಶಿರಾಡಿಯಲ್ಲಿ ಕೆಲವು ತಿಂಗಳ ಹಿಂದೆ ತಂದೆ ಮತ್ತು ಮಗನ ಮೇಲೆ ಕಾಡಾನೆ ದಾಳಿ ಮಾಡಿದ್ದು, ತಂದೆ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಸೋಮವಾರ ಕಡಬ ತಾಲೂಕಿನ ಮರ್ಧಾಳದ ಮೀನಾಡಿ ಸಮೀಪ ನೈಲ ಎಂಬಲ್ಲಿ ಕಾಡಾನೆ ದಾಳಿಗೆ ಯುವತಿ ಸೇರಿದಂತೆ ಎರಡು ಜೀವಗಳು ಬಲಿಯಾಗಿದ್ದವು. ಈ ವಿಚಾರವಾಗಿ ಸಾಮಾಜಿಕ ಸಂಘಟನೆ ನೀತಿ ತಂಡವು ಸಚಿವ ಎಸ್ ಅಂಗಾರ ಮತ್ತು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ರಾತ್ರೋರಾತ್ರಿಯೇ ಕಾಡಾನೆಯನ್ನು ಸೆರೆಹಿಡಿಯಲು ಸಾಕಾನೆಗಳನ್ನು ತರಿಸಿದೆ.
ಆನೆ ಹಿಡಿಯಲು ಬೇಕಾದ ಸಹಕಾರ ನೀಡುವಂತೆ ಸರ್ಕಾರಕ್ಕೆ ಅರಣ್ಯ ಇಲಾಖೆ ಸಲ್ಲಿಸಿದ ಮನವಿ ಎಲ್ಲಿ ಎಂದು ಸಂಘಟನೆ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ. ಬಳಿಕ ಸಚಿವರು ಸ್ಥಳಕ್ಕೆ ಬಾರದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆ ವೇಳೆ ಘಟನಾ ಸ್ಥಳಕ್ಕೆ ಬಂದ ಸಚಿವ ಎಸ್ ಅಂಗಾರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ರಾತ್ರಿ ವೇಳೆಗೆ ಮೈಸೂರು ಹಾಗೂ ದುಬಾರೆಯಿಂದ ಐದು ಸಾಕಾನೆಗಳು ಆಗಮಿಸಿದ್ದು, ಇಂದು ಬೆಳಗ್ಗೆಯಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಕಾಡಾನೆ, ಸಿಮೆಂಟ್ ಟ್ಯಾಂಕ್‌ಗೆ ಬಿದ್ದು ಸಾವು
ಅರಣ್ಯ ಇಲಾಖೆ ಅಧಿಕಾರಿಗಳು ನರ ಹಂತಕ ಕಾಡಾನೆಗಳ ಚಲನವಲನ ಪತ್ತೆ ಹಚ್ಚಲು ಡ್ರೋನ್ ಬಳಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೂರ್ವ ಸಿದ್ಧತೆಯೊಂದಿಗೆ ಕಾಡಾನೆಯನ್ನು ಪತ್ತೆ ಹಚ್ಚಿ ಹಿಡಿದು, ಬೇರೆಡೆಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ದುಬಾರೆ ಆನೆ ಕ್ಯಾಂಪ್, ನಾಗರಹೊಳೆಯ ಮತ್ತಿಗೋಡಿನಿಂದ ಆಗಮಿಸಿದ 5 ಸಾಕಾನೆಗಳಿಂದ ಕೂಡಿದ 5 ತಂಡಗಳಿಂದ ಕಾರ್ಯಾಚರಣೆ ಆರಂಭವಾಗಿದೆ.
ಡಿಸಿಎಫ್ ದಿನೇಶ್ ವೈ.ಕೆ, ಅರಣ್ಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಸುಳ್ಯ, ಪಂಜ, ಸುಬ್ರಮಣ್ಯ ವಲಯಗಳ ಸುಮಾರು 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು, ತರಬೇತಿ ಪಡೆದ 30 ಆನೆ ಮಾವುತರು ಮತ್ತು ಕಾವಾಡಿಗರ ತಂಡ, ಆಯಾ ಭಾಗಗಳ ಸ್ಥಳೀಯರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.
ಹಿನ್ನೆಲೆ: ಸೋಮವಾರ ಮುಂಜಾನೆ ಯುವತಿ ಸೇರಿ ಇಬ್ಬರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಪರಿಣಾಮವಾಗಿ ಅವರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪೇರಡ್ಕ ಹಾಲು ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಆನೆ ದಾಳಿ ಮಾಡಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿದ್ದ ಸ್ಥಳೀಯ ರಮೇಶ್ ರೈ ಎಂಬವರ ಮೇಲೂ ಅಟ್ಟಹಾಸ ಮೆರೆದಿತ್ತು. ಆನೆಯ ಹಠಾತ್ ದಾಳಿಯಿಂದ ರಮೇಶ್ ರೈ ಸ್ಥಳದಲ್ಲೇ ಅಸುನೀಗಿದ್ದರು. ರಂಜಿತಾ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಸುದ್ದಿ ತಿಳಿದು ಆಕ್ರೋಶಿತರಾದ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಜೊತೆಗೆ ಜಿಲ್ಲಾಧಿಕಾರಿ ಮತ್ತು ಸಚಿವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದರು. ಬಳಿಕ ಸಂಜೆ ವೇಳೆ ಜಿಲ್ಲಾಧಿಕಾರಿ ರವಿಕುಮಾರ್ ಭೇಟಿ ನೀಡಿ ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು. ಜೊತೆಗೆ ಮೃತ ರಂಜಿತಾ ಸಹೋದರಿಗೆ ಉದ್ಯೋಗ ಭರವಸೆ ನೀಡಿದರು.
ಇದನ್ನೂ ಓದಿ: ಉಪ್ಪಿನಂಗಡಿ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ 15 ಲಕ್ಷ ಪರಿಹಾರ ಮಂಜೂರು