ಮಂಗಳೂರು: ರಾಷ್ಟ್ರೀಕರಣ ಮಾಡುವುದು ಕಾಂಗ್ರೆಸ್ ಪದ್ಧತಿ, ಖಾಸಗೀಕರಣ ಮಾಡುವುದು ಬಿಜೆಪಿ ರೀತಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಿ ಖಾಸಗೀಕರಣ ಮಾಡಿರುವುದನ್ನು ವಿರೋಧಿಸಿ ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಕೆಂಜಾರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿಗಿಂತಲೂ ಪವರ್ ಪುಲ್ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದರೆ ಇನ್ನೇನು ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಜನರ ಧ್ವನಿಯಲ್ಲಿ ಸರಣಿ ಪ್ರತಿಭಟನೆ ಮಾಡುತ್ತಿರುವುದಕ್ಕೆ ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವರುಗಳಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಭಾಗಿಯಾಗಿದ್ದರು.