ಮಂಗಳೂರು: ಸೋಮವಾರ ಮಧ್ಯಾಹ್ನ ಮಂಗಳೂರಿನ ಉಳ್ಳಾಲ ಸಮೀಪ ಹರಿಯುವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಚಿಕ್ಕಮಗಳೂರು ಮೂಲದ ಪ್ರಸನ್ನಗೌಡ ಶವ ಕೊನೆಗೂ ಪತ್ತೆಯಾಗಿದೆ. ಘಟನೆ ನಡೆದ ನಂತರದ ಸುಮಾರು 24 ಗಂಟೆಗಳ ಬಳಿಕ ಶವವನ್ನು ನದಿಯಿಂದ ಹೊರತೆಗೆಯಲಾಗಿದೆ.
ನಿನ್ನೆ ಮಧ್ಯಾಹ್ನದಿಂದ ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಸಂಜೆ ಅದೇ ಸ್ಥಳದಲ್ಲಿ ಒಂದು ಶವ ಸಿಕ್ಕಿತ್ತು. ಅದು ಪ್ರಸನ್ನ ಗೌಡ ಅವರ ಶವ ಎಂದೇ ಭಾವಿಸಲಾಗಿತ್ತು. ಆದರೆ ಕುಟುಂಬ ಸದಸ್ಯರು ಪರಿಶೀಲಿಸಿದ ನಂತರ ಅದು ಬೇರೆ ಯಾರದ್ದೋ ಶವ ಎಂದು ತಿಳಿದುಬಂದಿದೆ. ನಿರಂತರ ಹುಡುಕಾಟದ ನಂತರ ಇಂದು ಮಧ್ಯಾಹ್ನ ಪ್ರಸನ್ನಗೌಡರ ಶವ ಸಿಕ್ಕಿದೆ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಸ್ಥಳೀಯ ಮೀನುಗಾರರು, ಮುಳುಗು ತಜ್ಞರ ಸಹಾಯದಿಂದ ಶವ ಮೇಲಕ್ಕೆತ್ತಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಹುಟ್ಟೂರು ಚಿಕ್ಕಮಗಳೂರು ಸಮೀಪದ ಬೈರಾಪುರ ಗ್ರಾಮಕ್ಕೆ ಮೃತದೇಹವನ್ನು ತರಲಾಗುತ್ತದೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ: ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಶಂಕರೇಗೌಡ ಎಂಬವರ ಪುತ್ರ ಪ್ರಸನ್ನ ಗೌಡ (35 ವರ್ಷ) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಸನ್ನ ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ತರಕಾರಿ ಸೊಪ್ಪು ಹೋಲ್‌ಸೇಲ್ ವ್ಯಾಪಾರ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ವ್ಯಾಪಾರದ ಹಣ ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಫೋಟೋ ಹಾಗೂ ಡಿ.ಎಲ್. ವಿಳಾಸದ ಗುರುತಿನ ಮೇಲೆ ನದಿಗೆ ಹಾರಿದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿತ್ತು.
ಪ್ರಸನ್ನ ಗೌಡ ಪತ್ನಿ, ಇಬ್ಬರು ಚಿಕ್ಕ ಹೆಣ್ಣುಮಕ್ಕಳು, ತಂದೆ ತಾಯಿಯನ್ನು ಅಗಲಿದ್ದಾರೆ. 2019ರಲ್ಲಿ ಕಾಫಿ ಡೇ ಮಾಲೀಕರಾದ ವಿ.ಜಿ.ಸಿದ್ದಾರ್ಥ ಹೆಗ್ಡೆ ನದಿಗೆ ಹಾರಿದ್ದ ಸ್ಥಳದಲ್ಲಿಯೇ ಇವರೂ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: ಮಂಗಳೂರು: ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ