ನೆಲ್ಯಾಡಿ (ದಕ್ಷಿಣ ಕನ್ನಡ): ಗೂಡ್ಸ್ ಟೆಂಪೋಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರಾಡಿ ಘಾಟ್‌ನ ಗುಂಡ್ಯ ಕೆಂಪು ಹೊಳೆ ಸಮೀಪ ಬುಧವಾರ ಬೆಳಗ್ಗೆ ಸಂಭವಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಅಪಘಾತದಲ್ಲಿ ಗೂಡ್ಸ್ ಟೆಂಪೋ ವಾಹನದ ಚಾಲಕ ಹಾಗೂ ಇನ್ನೊಬ್ಬರು ಮೃತಪಟ್ಟಿದ್ದು, ಮೃತರು ಹಾಸನ ನಿವಾಸಿಗಳು ಎನ್ನಲಾಗಿದೆ. ಈ ಅಪಘಾತದಲ್ಲಿ ಗೂಡ್ಸ್ ಟೆಂಪೋ ವಾಹನವು ಸಂಪೂರ್ಣ ಜಖಂಗೊಂಡಿದ್ದು, ಗೂಡ್ಸ್ ಟೆಂಪೋಗೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಅಪಘಾತದ ಸ್ಥಳಕ್ಕೆ ಸಕಲೇಶಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಕಲೇಶಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತ್ಯೇಕ ಪ್ರಕರಣ- ತೋಟಕ್ಕೆ ನುಗ್ಗಿ ಕಾಡಾನೆ ದಾಳಿ, ಹಸು ಸಾವು : ಜಿಲ್ಲೆಯ ಕಡಬ ತಾಲೂಕಿನ ಕೊಣಾಜೆ ಸಿ ಆರ್ ಸಿ. ತಮಿಳು ಕಾಲೋನಿ ಬಳಿ ಹಸುವೊಂದು ರಾತ್ರಿ ವೇಳೆ ತೋಟದಲ್ಲಿ ಗಾಯಗೊಂಡು ಮೃತಪಟ್ಟಿದೆ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಕಾಡಾನೆ ದಾಳಿಯಿಂದ ಹಸು ಮೃತಪಟ್ಟಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಕೊಣಾಜೆ ದೊಡ್ಡಮನೆಯ ಅಶೋಕ ಎಂಬುವರಿಗೆ ಸೇರಿದ್ದ ಹಸುವನ್ನು ಮಂಗಳವಾರ ಮೇಯಲು ಬಿಟ್ಟಿದ್ದರು. ಸಾಮಾನ್ಯವಾಗಿ ಸಂಜೆ ವೇಳೆಗೆ ಮನೆಗೆ ಬರುತ್ತಿದ್ದ ಹಸು ನಿನ್ನೆ ಸಂಜೆ ಮನೆಗೆ ಬಂದಿರಲಿಲ್ಲ. ಮನೆಯವರು ಎಷ್ಟೇ ಹುಡುಕಾಡಿದರೂ ಹಸು ಸಿಕ್ಕಿರಲಿಲ್ಲ. ಇಂದು ಬುಧವಾರ ಬೆಳಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ತೋಟದಲ್ಲಿ ಹಸು ಗಾಯಗೊಂಡು ಸತ್ತು ಬಿದ್ದಿರುವುದು ಕಂಡು ಬಂದಿದೆ.
ತೋಟಕ್ಕೆ ಕಾಡಾನೆ ಪ್ರವೇಶಿಸಿದ ಕುರುಹುಗಳು ಪತ್ತೆಯಾಗಿವೆ. ತೋಟದಲ್ಲಿ ನೀರಾವರಿ ಪೈಪ್‌ಗಳಿಗೂ ಹಾನಿಯಾಗಿದೆ. ರಾತ್ರಿ ವೇಳೆ ಕಾಡಾನೆ ಬಂದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಕಾಡಾನೆ ಬರುತ್ತಿರಬೇಕಾದರೆ ತನ್ನ ಎದುರು ಸಿಕ್ಕಿರುವ ಹಸುವನ್ನು ಕೊಂದು ಹಾಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಅರಣ್ಯಾಧಿಕಾರಿ ವಿಮಲ್ ಬಾಬು ಮಾತನಾಡಿ, ಕಾಡಾನೆ ದಾಳಿ ಮಾಡಿ ಹಸುವನ್ನು ಕೊಂದಿರುವ ಮಾಹಿತಿಯ ಹಿನ್ನೆಲೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮೃತಪಟ್ಟ ಹಸುವನ್ನು ಪಶು ವೈದ್ಯಾಧಿಕಾರಿ ಡಾ. ಅಜಿತ್ ನೇತೃತ್ವದಲ್ಲಿ ವೈದ್ಯಕೀಯ ಪರಿಶೀಲನೆ ಮಾಡಿಸಿದ್ದು, ಕಾಡಾನೆ ದಾಳಿಯಲ್ಲೇ ಹಸು ಸಾವಿಗೀಡಾಗಿರುವುದು ಕಂಡು ಬಂದಿದೆ. ಕಾಡಾನೆ ವಾಪಸ್ ಕಾಡಿಗೆ ಹೋಗಿರುವ ಸಾಧ್ಯತೆ ಇದೆ. ವೈದ್ಯಕೀಯ ವರದಿ ಆಧಾರದಲ್ಲಿ ಇಲಾಖೆಯಿಂದ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂಓದಿ:ದಾವಣಗೆರೆಯಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಸಾವು, ಐವರಿಗೆ ಗಂಭೀರ ಗಾಯ