ಮಂಗಳೂರು: ನಗರದ ಹೊರವಲಯದಲ್ಲಿರುವ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಿಂದ ಆದೇಶ ಪ್ರಕಟವಾಗಿದೆ. ವಿಶ್ವಹಿಂದೂ ಪರಿಷತ್ನ ಅರ್ಜಿ ಸ್ವೀಕರಿಸಿದ ನ್ಯಾಯಾಲಯವು ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಮಳಲಿ ಮಸೀದಿಯ ಅರ್ಜಿ ವಿಚಾರಣೆಯು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲೇ ನಡೆಯಲಿದೆ ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯವು ಅಧಿಕಾರ ವ್ಯಾಪ್ತಿ ಹೊಂದಿದೆ ಎಂದು ಹೇಳಿದೆ.
ನ್ಯಾಯಾಲಯವು ಕಮಿಷನರ್ ನೇಮಿಸಿ ಮಸೀದಿ ಸರ್ವೇ ಮಾಡಬೇಕೆಂದು ಒತ್ತಾಯಿಸಿ ವಿಹೆಚ್ಪಿ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ಸ್ವೀಕರಿಸಿದ ಕೋರ್ಟ್ 2023ರ ಜನವರಿ 8ಕ್ಕೆ ವಿಚಾರಣೆ ಮುಂದೂಡಿದೆ.
ಇನ್ನೊಂದೆಡೆ ಮಸೀದಿ ಕಾಮಗಾರಿ ತಡೆಯಾಜ್ಞೆ ತೆರವು ಮಾಡಿ, ವಿಹೆಚ್ಪಿ ಅರ್ಜಿ ವಜಾಗೊಳಿಸುವಂತೆ ಮಸೀದಿ ಕಮಿಟಿ ಮನವಿ ಮಾಡಿತ್ತು. ಮಸೀದಿ ಆಡಳಿತ ಮಂಡಳಿ ಪರ ವಕೀಲರು ಮಸೀದಿ ವಕ್ಪ್ ಆಸ್ತಿಯಾಗಿರುವುದರಿಂದ ವಕ್ಫ್ ಟ್ರಿಬ್ಯುನಲ್ನಲ್ಲೇ ವಿಚಾರಣೆ ನಡೆಸಬೇಕು ಎಂದು ವಾದಿಸಿದ್ದರು. ಆದರೆ ಮಸೀದಿ ಕಮಿಟಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಜ್ಞಾನವಾಪಿ ಮಾದರಿಯಲ್ಲೇ ಮಳಲಿ ಮಸೀದಿ ವಿವಾದದ ವಿಚಾರಣೆಯೂ ಸಾಗಲಿದೆ.
ಇದನ್ನೂ ಓದಿ: ಸುಪ್ರೀಂ ಸಿಜೆಐ ಆಗಿ ಡಿವೈ ಚಂದ್ರಚೂಡ್ ಪ್ರಮಾಣ: ತಂದೆಯಂತೆ ಮಹತ್ವದ ಸ್ಥಾನ ಅಲಂಕರಿಸಿದ ಪುತ್ರ!