ಮಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ವಿರುದ್ಧ ಸಾಕ್ಷ್ಯಗಳಿದ್ದರೆ ಸರ್ಕಾರಕ್ಕೆ ನೀಡಲಿ ಎಂದು ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಸಲಹೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಪಿಎಫ್ಐ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಉಲ್ಲಂಘಿಸುವ ಯಾವುದೇ ಸಂಸ್ಥೆ ಆಗಿರಲಿ, ಪಿಎಫ್ಐ, ಆರ್ಎಸ್ಎಸ್ ಅಥವಾ ನಮ್ಮದೇ ಸಂಘಟನೆಗಳಾದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶೇಕಡಾ 40ರಷ್ಟು ಕಮಿಷನ್ ಪಡೆಯುವ ಸರ್ಕಾರ ಎಂದು ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ಇದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ದಾಖಲೆಗಳಿದ್ದರೆ ಸರ್ಕಾರ, ತನಿಖಾ ಸಂಸ್ಥೆ ಹಾಗೂ ಕೋರ್ಟ್ ಮುಂದೆ ಇಡಲಿ ಎಂದು ಭೋಜೇಗೌಡ ಆಗ್ರಹಿಸಿದರು.
ಕಮಿಷನರ್ ಕಚೇರಿ ಮುಂದೆ ಧರಣಿ: ಅತಿಥಿ ಶಿಕ್ಷಕರಿಗೆ ವೇತನ ನೀಡದೆ ಇರುವ ಬಗ್ಗೆ ಈಗಾಗಲೇ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದೇನೆ. ಅತಿಥಿ ಶಿಕ್ಷಕರಿಗೆ ಕಳೆದ ಐದಾರು ತಿಂಗಳುಗಳಿಂದ ವೇತನ ದೊರೆಯದೇ ಸಂಕಷ್ಟದಲ್ಲಿದ್ದಾರೆ. ಸರ್ಕಾರ ನವರಾತ್ರಿ ಹಬ್ಬದೊಳಗೆ ಅವರ ವೇತನ ನೀಡದಿದ್ದರೆ ಶಿಕ್ಷಣ ಇಲಾಖೆಯ ಕಮಿಷನರ್ ಕಚೇರಿ ಮುಂದೆ ನಾನು ಧರಣಿ ನಡೆಸುತ್ತೇನೆ ಎಂದು ಭೋಜೇಗೌಡ ಎಚ್ಚರಿಸಿದರು.
ಇದನ್ನೂ ಓದಿ: ಪಿಎಫ್ಐ ಬ್ಯಾನ್ ಸ್ವಾಗತಿಸಿದ ಕಾಂಗ್ರೆಸ್ ನಾಯಕರು: ಆರ್ಎಸ್ಎಸ್ ವಿರುದ್ಧವೂ ಕ್ರಮಕ್ಕೆ ಒತ್ತಾಯ