ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 10 ದಿನದ ಮಗು ಸೇರಿದಂತೆ 75 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಹಾಗೆಯೇ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ ಮಾಡಿದ್ದಾರೆ.
![Mangalore](https://etvbharatimages.akamaized.net/etvbharat/prod-images/kn-mng-05-dc-photo-7202146_04072020204129_0407f_03244_85.jpg)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 1095 ಪ್ರಕರಣಗಳು ಪತ್ತೆಯಾಗಿದ್ದು, ಜನಸಂಖ್ಯೆಗೆ ಹೋಲಿಸಿದರೆ ಇದು ಶೇಕಡಾ 0.054 ಆಗಿದೆ. ದೃಢಪಟ್ಟಿರುವ ಪ್ರಕರಣಗಳಲ್ಲಿ ಶೇಕಡಾ 50 ಮಂದಿ ಹೊರ ರಾಜ್ಯದಿಂದ ಮತ್ತು ವಿದೇಶದಿಂದ ಬಂದವರು. ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ 210 ಹಾಗೂ ದ್ವಿತೀಯ ಸಂಪರ್ಕ ಹೊಂದಿದ 5 ಮಂದಿಗೆ ಮಾತ್ರ ಸೋಂಕು ತಗುಲಿದೆ. ಚಿಕಿತ್ಸೆಗೆ ಒಳಪಟ್ಟವರಲ್ಲಿ ಶೇಕಡಾ 98ರಷ್ಟು ಮಂದಿ ಗುಣಮುಖರಾಗಿರುತ್ತಾರೆ. ವೆಂಟಿಲೇಟರ್ ಮತ್ತು ಆಮ್ಲಜನಕ ನೀಡಿ ಚಿಕಿತ್ಸೆ ಪಡೆಯುವ ಅವಶ್ಯಕತೆಗೆ ಬಿದ್ದವರು ಕೇವಲ 25 ಮಂದಿ ಮಾತ್ರ. ಆದ ಕಾರಣ ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಮತ್ತು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡುವುದು ಹಾಗೂ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡುವಂತೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.
ಇಂದು ಕೊರೊನಾ ದೃಢಪಟ್ಟ 75 ಮಂದಿಯಲ್ಲಿ 10 ದಿನದ ಮಗು, 1, 3, 5, 7 ವರ್ಷದ ತಲಾ ಒಂದು ಮತ್ತು 10 ವರ್ಷದ ಇಬ್ಬರು ಮಕ್ಕಳು ಸೇರಿದ್ದಾರೆ. 75 ಮಂದಿಯಲ್ಲಿ 11 ಜನ ಅಬುಧಾಬಿ, ಮಸ್ಕತ್, ದುಬೈನಿಂದ ಬಂದವರಾಗಿದ್ದಾರೆ. 29 ಐಎಲ್ಐ, 6 ಸಾರಿ ಪ್ರಕರಣ, 24 ಮಂದಿ ಪ್ರಾಥಮಿಕ ಸಂಪರ್ಕ, ಓರ್ವನಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ. 4 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಇಂದು 13 ಮಂದಿ ಗುಣಮುಖರಾಗಿದ್ದು, ಇದರಲ್ಲಿ 9 ಮಂದಿ ಪುರುಷರು, ನಾಲ್ಕು ಮಂದಿ ಮಹಿಳೆಯರಾಗಿದ್ದಾರೆ. ಇಂದು ಮೂರು ಮಂದಿ ಸಾವನ್ನಪ್ಪಿದ್ದಾರೆ. ಐದು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 1095 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 516 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 22 ಮಂದಿ ಸಾವನ್ನಪ್ಪಿದ್ದು, 557 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 560 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ.
ಜೂನ್ 5ರಂದು ದ.ಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಇದೆ. ಅಗತ್ಯ ವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧಾಲಯ ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.