ಬಂಟ್ವಾಳ(ದಕ್ಷಿಣಕನ್ನಡ) : ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಅವರ ಮನೆಗೆ ಅವರು ಇಲ್ಲದಿರುವಾಗ ಪೊಲೀಸರು ಮಧ್ಯರಾತ್ರಿ ವೇಳೆ ತೆರಳಿರುವುದು ಸರಿಯಾದ ಕ್ರಮವಲ್ಲ. ಆ ಹೊತ್ತಿನಲ್ಲಿ ಹೋಗಿ ಕಿರುಕುಳ ನೀಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇದು ಹೋರಾಟಗಾರರ ಸದ್ದಡಗಿಸುವ ಕೆಲಸವಾಗಿದೆ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳುವ ಅಗತ್ಯ ಇದೆ. ಇದು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕಾರ್ಯವಾಗಿದ್ದು, ಹೋರಾಟಗಾರರು ತಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ. ಬದಲಾಗಿ ಜನಸಾಮಾನ್ಯರಿಗಾಗಿ ಮಾಡುತ್ತಿದ್ದಾರೆ. ಸಂಘಟನೆ ಸದಸ್ಯರು ಎಲ್ಲರೂ ಇದನ್ನು ಖಂಡಿಸಬೇಕು. ಪೊಲೀಸ್ ಇಲಾಖೆಯ ಈ ಕ್ರಮ ದಬ್ಬಾಳಿಕೆಯಾಗಿದ್ದು, ಪ್ರತಿಭಟನಾಕಾರರ ಹಕ್ಕು ಕಿತ್ತುಕೊಳ್ಳುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲಿ ಟೋಲ್ ಗೇಟ್ ಇದೆ. ಅದನ್ನು ಟೋಲ್ ಗೇಟ್ ಎಂದು ಹೇಳಲು ಸಾಧ್ಯವೂ ಇಲ್ಲದಂಥ ಪರಿಸ್ಥಿತಿ ಇದೆ. ಟೋಲ್ ಗೇಟ್ ಹೆಸರಲ್ಲಿ ಇವತ್ತು ಹಣ ಸಂಗ್ರಹ ಮಾಡುತ್ತಿರುವುದು, ಇದರ ಮೂಲ ಉದ್ದೇಶವನ್ನು ಮರೆತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ದರೋಡೆ ಮಾಡುತ್ತಿದೆ. ಈ ಭಾಗದ ಲೋಕಸಭಾ ಸದಸ್ಯರು ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಹೋರಾಟಗಾರರು ಒಂದು ಬಾರಿ ಸಂಸದರ ಬಳಿ ಹೋಗಿದ್ದಾಗ ಟೋಲ್ ಗೇಟ್ ಒಡೆಯಿರಿ ಎಂದು ಹೇಳಿದ್ದರು ಎಂದರು.
ಸುರತ್ಕಲ್ ನಲ್ಲಿ ಟೋಲ್ ಗೇಟ್ ವಿರುದ್ಧ ಸಾಮಾಜಿಕ ಹೋರಾಟಗಾರರು, ಪಕ್ಷಬೇಧ ಮರೆತು ಹೋರಾಟ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಚುನಾಯಿತ ಜನಪ್ರತಿನಿಧಿಗಳು ಟೋಲ್ ಗೇಟ್ ತೆರವುಗೊಳಿಸುವ ಭರವಸೆ ನೀಡಿದರೂ ಇನ್ನೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಈ ಪ್ರಾಧಿಕಾರದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವವರು. ಈ ಭಾಗದ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭ ತೆರವುಗೊಳಿಸುವ ಭರವಸೆ ನೀಡಿದ್ದರು. ಆದ್ರೆ ಇನ್ನೂ ಈ ಭರವಸೆ ಈಡೇರಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಟೋಲ್ ಗೇಟ್ ಹೋರಾಟ.. ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಕಿಡಿ