ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಕೇರಳ ಸಂಪರ್ಕದ ಬಗ್ಗೆ ಪ್ರಾಥಮಿಕ ಮಾಹಿತಿ ಬಂದಿದ್ದು, ಆ ರಾಜ್ಯದ ಪೊಲೀಸರ ಜೊತೆಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಹತ್ಯೆಯ ಘಟನೆಯ ಬಳಿಕ ಜಿಲ್ಲೆಯ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದೇನೆ. ರಾಜ್ಯದ ಡಿಜಿ ಮುಖಾಂತರ ಕೇರಳ ಡಿಜಿ ಜೊತೆಗೆ ಸಂಪರ್ಕದಲ್ಲಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಎಸ್ ಪಿ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಸಂಪರ್ಕದಲ್ಲಿದ್ದಾರೆ. ಗಡಿಯಲ್ಲಿ ಈ ಘಟನೆ ನಡೆದಿರುವುದರಿಂದ ಕೇರಳದ ಸಂಪರ್ಕದ ಬಗ್ಗೆ ಪ್ರಾಥಮಿಕ ಮಾಹಿತಿ ಬಂದಿರುವುದರಿಂದ ಆ ರಾಜ್ಯದ ಪೊಲೀಸರ ಜೊತೆಗೆ ಸಂಪರ್ಕದಲ್ಲಿದ್ದು, ಸಿಬ್ಬಂದಿ ಸಹಕರಿಸುತ್ತಿದ್ದಾರೆ ಎಂದರು.
ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ. ಅರೆಸ್ಟ್ ಆದವರ ವಿಚಾರಣೆ ನಡೆಸಿದಾಗ ಮುಂದೆ ಸಿಗುವ ಮಾಹಿತಿ ಆಧರಿಸಿ ಕಾರ್ಯಾಚರಣೆಯನ್ನು ಪೊಲೀಸರು ನಡೆಸಲಿದ್ದಾರೆ. ಪೊಲೀಸರಿಗೆ ಮುಕ್ತವಾದ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಅವರು ಕಾನೂನು ಪ್ರಕಾರ ತನಿಖೆ ನಡೆಸಿ ಕೊಲೆಗಡುಕರಿಗೆ ಉಗ್ರ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿದರು.
ತನಿಖೆಯ ಬಳಿಕ ಈ ಕೊಲೆ ಕೃತ್ಯದಲ್ಲಿ ಯಾವ ಸಂಘಟನೆ ಇದೆ ಎಂದು ತಿಳಿಯಲಿದೆ. ವಿಚಾರಣೆಯ ಹಂತದಲ್ಲಿ ಹೇಳಲು ಕಷ್ಟವಾಗುತ್ತದೆ. ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರು ಅಲ್ಲಿಗೆ ಹೋದ ಬಳಿಕ ಪರಿಹಾರದ ಬಗ್ಗೆ ನಿರ್ಧರಿಸುತ್ತೇನೆ ಎಂದರು.
ಪ್ರಶ್ನೆಗೆ ಉತ್ತರಿಸದ ಸಿಎಂ: ಬೆಳ್ಳಾರೆಯಲ್ಲಿ ನಿನ್ನೆ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಹೋಗುತ್ತಿರುವ ಮುಖ್ಯಮಂತ್ರಿಗಳಿಗೆ ಅದೇ ಜಾಗದಲ್ಲಿ ಇತ್ತೀಚಿಗೆ ಹತ್ಯೆಯಾದ ಮಸೂದ್ ಮನೆಗೆ ಭೇಟಿ ನೀಡುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೇ ತೆರಳಿದರು. ಪ್ರವೀಣ್ ನೆಟ್ಟಾರು ಹತ್ಯೆಗೆ ಕೆಲ ದಿನಗಳ ಮುಂಚೆ ಅದೇ ಪರಿಸರದಲ್ಲಿ ಮಸೂದ್ ಎಂಬ ಯುವಕನ ಹತ್ಯೆಯಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಓದಿ: ಪ್ರವೀಣ್ ಒಬ್ಬನೇ ಇದ್ದಾಗ ಹೇಡಿಗಳ ರೀತಿ ಹತ್ಯೆ ಮಾಡಿ ಓಡಿ ಹೋಗಿದ್ದಾರೆ: ಕೆ. ಎಸ್. ಈಶ್ವರಪ್ಪ