ಬೆಳ್ತಂಗಡಿ: ಉಜಿರೆ ಬಾಲಕನ ಅಪಹರಣ ಪ್ರಕರಣವನ್ನು ಬೇಧಿಸಿ ಸುಖಾಂತ್ಯಗೊಳಿಸಿದ ಪೊಲೀಸ್ ಇಲಾಖೆಯ ತಂಡದ ಪರವಾಗಿ ತಾಲೂಕಿನ ಪೊಲೀಸ್ ಅಧಿಕಾರಿಗಳನ್ನು ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಕಾರ್ಯಾಚರಿಸಿದ ಬೆಳ್ತಂಗಡಿ ತಾಲೂಕು ಪೊಲೀಸ್ ಇಲಾಖೆಯ ತಂಡದ ಪರವಾಗಿ ಉಜಿರೆ ಪ್ರಕರಣದ ತನಿಖಾಧಿಕಾರಿ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಬೆಳ್ತಂಗಡಿ ಉಪ ನಿರೀಕ್ಷಕ ನಂದ ಕುಮಾರ್, ಧರ್ಮಸ್ಥಳ ಉಪ ನಿರೀಕ್ಷಕ ಪವನ್ ನಾಯ್ಕ್, ಬೆಳ್ತಂಗಡಿ ಸಂಚಾರಿ ಉಪ ನಿರೀಕ್ಷಕ ಕುಮಾರ್ ಕಾಂಬ್ಳೆ ಅವರನ್ನು ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಜಿರೆ ಪ್ರಕರಣದಲ್ಲಿ ಜಿಲ್ಲಾ ಎಸ್ಪಿಯವರ ಮಾರ್ಗದರ್ಶನದಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರಿಂದ ಅಪಹರಣಗೊಂಡ ಮಗುವನ್ನು ರಕ್ಷಿಸಲು ಸಾಧ್ಯವಾಗಿದೆ. ತನಿಖೆಗೆ ಪೂರಕವಾಗಿ ಯಾವುದೇ ಸಮಸ್ಯೆಯಾಗದಂತೆ ತಾಲೂಕಿನ ಮಾಧ್ಯಮ ಸ್ನೇಹಿತರು ಸಹಕರಿಸಿದ್ದಾರೆ. ನಮ್ಮ ಕರ್ತವ್ಯವನ್ನು ಗುರುತಿಸಿ, ಗೌರವಿಸಿರುವುದು ನಮ್ಮ ಸೇವಾ ಬದ್ಧತೆಗೆ ಸಂದ ಗೌರವವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಪೊಲೀಸ್ ವೃತ್ತ ಹಾಗೂ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು.
ಈ ವೇಳೆ ಉದ್ಯಮಿ ರಾಜೇಶ್ ಪೈ ಉಜಿರೆ, ಸಿರಿ ಗ್ರಾಮೋದ್ಯೋಗ ಆಡಳಿತ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಉಪಾಧ್ಯಕ್ಷ ದೀಪಕ್ ಅಠವಳೆ, ಕಾರ್ಯದರ್ಶಿ ಗುರುಮೂರ್ತಿ ಶಗ್ರಿತ್ತಾಯ, ಸಂಘದ ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಕಾರ್ಯದರ್ಶಿ ಮನೋಹರ್ ಬಳಂಜ, ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.