ಉಡುಪಿ: ಜಿಲ್ಲೆಯಲ್ಲಿ ಐತಿಹ್ಯಗಳಿರುವ ಸಾಕಷ್ಟು ಪ್ರದೇಶಗಳು ಇಂದಿಗೂ ಗತ ವೈಭವವನ್ನು ಸಾರುತ್ತಿವೆ. ಆದರೆ, ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಮಾತ್ರ ಐತಿಹಾಸಿಕ ಪುರಾವೆಗಳಿರುವ ಸ್ಥಳಗಳ ರಕ್ಷಣೆಗೆ ಮನಸು ಮಾಡದೆ ಇಚ್ಛಾಶಕ್ತಿಯನ್ನು ಮರೆತು ಬಿಟ್ಟಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಅನ್ನುವಂತಿದೆ ಐತಿಹಾಸಿ ನಗರಿ ಬಸ್ರೂರಿನ ಸದಾನಂದ ಮಠ.
ಹೌದು, ಕುಂದಾಪುರ ತಾಲೂಕು ವ್ಯಾಪ್ತಿಯ ಬಸ್ರೂರು ಸಾಕಷ್ಟು ಐತಿಹ್ಯಗಳನ್ನು ಬಚ್ಚಿಟ್ಟುಕೊಂಡು ಮೌನವಾಗಿ ಕುಳಿತಿರುವ ಊರು. ಈ ಸ್ಥಳದ ಐತಿಹ್ಯದ ಪುಟ ತೆರೆದು ನೋಡಿದ್ರೆ ಬಸ್ರೂರಿನಲ್ಲಿ ಹಿಂದೆ ಗುಪ್ಪೆ ಹಾಡಿಯಲ್ಲಿ ಸದಾನಂದ ಸ್ವಾಮೀಜಿ ಮಠವೊಂದಿತ್ತು. ಪ್ರಸಿದ್ಧವಾದ ಈ ಮಠಕ್ಕೆ ನೂರಾರು ಮಂದಿ ಭಕ್ತರು ಬರ್ತಾ ಇದ್ರಂತೆ. ಮಠದ ಮುಖ್ಯಸ್ಥ ಸದಾನಂದ ಸ್ವಾಮೀಜಿಗೆ ಪ್ರತಿದಿನ ಹಾಲು ತಂದು ಕೊಡುವಾಕೆಗೆ ಮಠದ ಸ್ವತ್ತುಗಳನ್ನು ನೋಡಿ ಆಸೆಯಾಗಿತ್ತಂತೆ. ಆಸೆಗೆ ಬಲಿಯಾಗಿ ಹಾಲಿಗೆ ವಿಷ ಬೆರೆಸಿ ಕೊಟ್ಟ ವಿಷಯ ಸ್ವಾಮಿಗಳಿಗೆ ಗೊತ್ತಾಗಿ ಹಾಲನ್ನು ಅವಳೆದುರೇ ತಾವು ಸಾಕಿದ ಪ್ರೀತಿಯ ಬೆಕ್ಕಿಗೆ ಎರೆದಾಗ ಕುಡಿದ ಬೆಕ್ಕು ಸಾವನ್ನಪ್ಪಿತ್ತು.
ಹಾಲಿನಾಕೆ ಭಯದಿಂದ ತತ್ತರಿಸಿ ತನ್ನ ತಪ್ಪನ್ನು ಒಪ್ಪಿಕೊಂಡಾಗ ಕುಪಿತರಾಗಿದ್ದ ಸ್ವಾಮೀಜಿ ಹಾಲಿನ ಚೆಂಬು ಹಿಡಿದ ಶಿಲಾಬಾಲಿಕೆ ಆಗುವಂತೆ ಆಕೆಯನ್ನು ಶಪಿಸಿದ್ದರಂತೆ. ಹಾಲಿನವಳ ವರ್ತನೆಯಿಂದ ಬೇಸರಗೊಂಡ ಸ್ವಾಮೀಜಿ ಗುಹೆಯೊಳಗೆ ನಡೆದೇ ಬಿಟ್ಟರಂತೆ. ಸದ್ಯ ಈ ಕಥೆಗೆ ಪೂರಕವಾಗಿ ಅನೇಕ ಪುರಾವೆಗಳು ದೊರೆತಿವೆ. ಸದಾನಂದ ಸ್ವಾಮಿ ಮಠವಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಮಠದ ಹೊರ ಆವರಣ, ಮುಖ್ಯ ಮಂದಿರ, ಪಾಣಿ ಪೀಠ, ಹೆಬ್ಬಾಗಿಲು ಮತ್ತಿತರ ಕುರುಹುಗಳನ್ನು ಈಗಲೂ ಕೂಡಾ ನೋಡಬಹುದಾಗಿದೆ. ಸ್ವಾಮೀಜಿ ಪ್ರವೇಶ ಮಾಡಿದ್ದರೆನ್ನಲಾದ ಗುಹೆಯ ಬಾಗಿಲಲ್ಲಿ ಸದ್ಯ ಬೃಹದಾಕಾರದ ಹುತ್ತವೊಂದು ತಲೆ ಎತ್ತಿ ನಿಂತಿದೆ.
ಬಸ್ರೂರಿನಲ್ಲಿ ಮಾರಿಗೊಂದು ಇತಿಹಾಸ ಸಾರುವ ಕುರುಹುಗಳು ಸಿಗುತ್ತವೆ. ಇಲ್ಲಿನ ಶಿಲಾಶಾಸನಗಳು ಬಸ್ರೂರಿನ ಹಿಂದಿನ ವೈಭವವನ್ನು ಸಾರಿ ಹೇಳುತ್ತವೆ. ಅಂತಹ ಒಂದು ಅಳಿದುಳಿದ ಅವಶೇಷವೇ ಸದಾನಂದ ಸ್ವಾಮಿ ಮಠ. ಬಸ್ರೂರು ಪೇಟೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಗುಪ್ಪಿ ಹಾಡಿಯೆನ್ನುವ ಪುಟ್ಟ ಕಾಡಿನಲ್ಲಿ ಸ್ವಲ್ಪ ದೂರ ಸಾಗಿದರೆ ಮಠದ ಅವಶೇಷಗಳ ದರ್ಶನ ಆಗುತ್ತದೆ. ಈ ಮಠಕ್ಕೆ ಸಂಬಂಧಪಟ್ಟಂತೆ ಗುಪ್ಪಿ ಹಾಡಿ ಎನ್ನುವುದು ವಿಜಯ ನಗರದ ಕಾಲಕ್ಕೂ ಮೊದಲು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎನ್ನುವುದಕ್ಕೆ 1531ರ ಶಾಸನವೊಂದು ತಿಳಿಸುತ್ತದೆ.
ಈ ಪ್ರದೇಶದಲ್ಲಿ ಗೋಪಿನಾಥ ದೇವರ ದೇವಾಲಯವಿತ್ತೆಂಬುದನ್ನೂ, ಸದಾನಂದ ಒಡೆಯರ ಮಠ ಇದ್ದ ಬಗ್ಗೆಯೂ ಶಾಸನ ಕೂಡಾ ಸಿಕ್ಕಿದೆ. ದೇವು ಶೆಟ್ಟಿ ಎಂಬಾತ ಗುಪ್ಪೆಯ ಜೀರ್ಣೋದ್ಧಾರಕ್ಕೆ 25 ವರಹನಾಣ್ಯಗಳನ್ನು ನೀಡಿದ್ದನೆಂದು ದೊಡ್ಡಕೆರೆ ಕಟ್ಟೆಯ ಶಾಸನ ತಿಳಿಸುತ್ತದೆ. ಆದರೆ ಸದ್ಯ ಯಾವುದೇ ಸಂರಕ್ಷಣೆ ಇಲ್ಲದೆ, ಅಳಿದುಳಿದ ಗುಪ್ಪೆ ಸದಾನಂದ ಮಠದ ಒಂದೊಂದೇ ಕಲ್ಲುಗಳು ಕೂಡ ಒಂದಿಷ್ಟು ಮನೆಗಳ ಮೆಟ್ಟಿಲನ್ನು ಸೇರಿಕೊಂಡು, ನಿರ್ಜನವಾಗಿರುವ ಈ ಪ್ರದೇಶ ಮಾತ್ರ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಕೈಯಲ್ಲಿ ಕತ್ತಿ ಹಿಡಿದು ದಾರಿ ಮಾಡಿಕೊಂಡು ಸಾಗಬೇಕಾಗಿರುವ ಕಾಡಿನಲ್ಲಿ ಸುಲಭದಲ್ಲಿ ಯಾರು ಪ್ರವೇಶಿಸಲು ಆಗದಿರುವುದು ಕಳ್ಳ ಕಾಕರಿಗೆ ಅಡಗುದಾಣವಾಗಿದೆ. ಇತಿಹಾಸದಲ್ಲಿ ಉಲ್ಲೇಖಿಸಿದಂತೆ ಮಠದಲ್ಲಿತ್ತು ಎನ್ನಲಾದ ಧನ, ಕನಕಗಳಿಗೆ ನಿಧಿ ಶೋಧಕರು ಈಗಾಗಲೇ ಸಾಕಷ್ಟು ಬಾರಿ ಹುಡುಕಾಟ ನಡೆಸಿ ಅರ್ಧದಲ್ಲಿ ಬಿಟ್ಟು ಓಡಿಹೋಗಿರುವ ಘಟನೆಗಳು ಇಲ್ಲಿ ಮರುಕಳಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಇಂತಹ ಐತಿಹಾಸಿಕ ಕುರುಹುಗಳಿರುವ ಸದಾನಂದ ಮಠವನ್ನು ಮತ್ತೆ ಪುನರುಜ್ಜೀವನಗೊಳಿಸುವ ಕೆಲಸ ಆಗಬೇಕಿದೆ. ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಮಠದ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕಾಗಿದೆ. ಇಲ್ಲವಾದಲ್ಲಿ ಸದ್ಯ ಇರುವ ಕುರುಹುಗಳೂ ಕೂಡ ಕಳ್ಳ ಕಾಕರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಥಳೀಯರಾದ ದಿವಾಕರ್ ಶೆಟ್ಟಿ ಹೇಳಿದ್ದಾರೆ.
ಒಟ್ಟಾರೆ ಇತಿಹಾಸ ಪುಟಗಳನ್ನು ತೆರೆದಿಡುವ ಇಂತಹ ಸ್ಥಳಗಳ ರಕ್ಷಣೆಗೆ ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಮುಂದಾಗಿ ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಿದೆ.