ಮಂಗಳೂರು: ದೇಶವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಕೊರೊನಾ ತಡೆಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ ಇನ್ನೂ ಹಲವು ರೀತಿಯ ಔಷಧಿಗಳ ಮೂಲಕ ಸೋಂಕನ್ನು ಮಟ್ಟ ಹಾಕಲು ಪ್ರಯತ್ನಿಸಲಾಗುತ್ತಿದೆ.
ಈ ನಡುವೆ ಆಯುಷ್ ಮಂತ್ರಾಲಯ ಆಯುಷ್-64 ಎನ್ನುವ ಮಾತ್ರೆಯನ್ನು ಕೊರೊನಾ ಸೋಂಕಿತರಿಗೆ ನೀಡಲು ತೀರ್ಮಾನಿಸಿದ್ದು, ಈ ಮಾತ್ರೆಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದೆಲ್ಲೆಡೆ ಕೊರೊನಾ ಸೋಂಕಿತರಿಗಾಗಿ ಲಭ್ಯವಿರುವ ಈ ಮಾತ್ರೆಯನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ.
ದೇಶದ 9 ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕೊರೊನಾ ಸೋಂಕು ತಡೆಗೆ ಈ ಮಾತ್ರೆಗಳು ಪರಿಣಾಮಕಾರಿ ಎನ್ನುವ ವರದಿಯನ್ನೂ ನೀಡಿದ್ದು, ಈ ಮಾತ್ರೆಗಳು ಈಗಾಗಲೇ ದೇಶದಾದ್ಯಂತ ಬಳಕೆಗೆ ಸಿಗುತ್ತಿವೆ. ಕೊರೊನಾ ಪಾಸಿಟಿವ್ ಸೋಂಕಿತರ ಪಾಲಿಗೆ ಪರಿಣಾಮಕಾರಿಯಾಗಿರುವ ಈ ಮಾತ್ರೆಗಳು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿಯೇ ತಯಾರಾಗುತ್ತಿವೆ. ಕಳೆದ 30 ವರ್ಷಗಳಿಂದ ಆಯುರ್ವೇದ ಔಷಧಿಗಳ ತಯಾರಿಯಲ್ಲಿ ನಿರತವಾಗಿರುವ ಎಸ್.ಡಿ.ಪಿ ರೆಮೆಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ಈ ಮಾತ್ರೆಗಳು ತಯಾರಾಗುತ್ತಿವೆ.
ಸೋಂಕಿತನ ಮೇಲೆ ಪರಿಣಾಮಕಾರಿ ಪ್ರಭಾವ: ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಸೈನ್ಸ್ ಮತ್ತು ನ್ಯಾಷನಲ್ ರಿಸರ್ಚ್ ಡೆವಲೆಪ್ಮೆಂಟ್ ಕಾರ್ಪೋರೇಷನ್ನಿಂದ ಪ್ರಮಾಣೀಕರಿಸಲ್ಪಟ್ಟಿರುವ ಈ ಮಾತ್ರೆಯು ಕೋವಿಡ್ ಸೋಂಕಿತನ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎನ್ನುವ ಸಂಶೋಧನೆಯನ್ನೂ ಹಲವು ಸಂಶೋಧನಾ ಸಂಸ್ಥೆಗಳು ನಡೆಸಿವೆ. ಕೊರೊನಾ ಲಕ್ಷಣಗಳು ಕಂಡು ಬಂದ ರೋಗಿಯನ್ನು ಬೇಗ ಗುಣಮುಖವಾಗುವಂತೆ ಮಾಡುವ, ಆಸ್ಪತ್ರೆಯಿಂದ ಚೇತರಿಸಿಕೊಳ್ಳುವಂತೆ ಮಾಡುವ ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲದ ಈ ಮಾತ್ರೆ ತನ್ನ ಕೆಲಸ ನಿರ್ವಹಿಸುತ್ತದೆ ಎನ್ನುವ ವರದಿಯನ್ನೂ ಹಲವು ಸಂಶೋಧನಾ ಸಂಸ್ಥೆಗಳು ನೀಡಿವೆ.
ಕಳೆದ 30 ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸಿಕೊಂಡು ಬರುತ್ತಿರುವ ಎಸ್.ಡಿ.ಪಿ ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಇಮ್ಯುನಿಟಿ ಹೆಚ್ಚಿಸುವ ಮಾತ್ರೆಗಳನ್ನು ತಯಾರಿಸುವ ಮೂಲಕ ಹಾಗೂ ಅವುಗಳನ್ನು ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಗೆ ನೀಡುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ತನ್ನ ಪಾತ್ರವನ್ನು ವಹಿಸಿತ್ತು. ಆಯುಷ್ ಮಂತ್ರಾಲಯದಿಂದ ಪರಿಚಯಿಸಲ್ಪಟ್ಟ ಈ ಮಾತ್ರೆಯ ಸಿದ್ಧತೆ ಇದೇ ಸಂಶೋಧನಾ ಘಟಕದಲ್ಲಿ ನಡೆಯುತ್ತಿದ್ದು, ಆಯುಷ್ ಮಂತ್ರಾಲಯದ ಸಂಶೋಧಕರು ಸೂಚಿಸಿದ ಪ್ರಮಾಣದ ವಸ್ತುಗಳನ್ನು ಹಾಕುವ ಮೂಲಕ ಮಾತ್ರೆಗಳನ್ನು ತಯಾರಿಸಲಾಗುತ್ತಿದೆ.
ಆಯುರ್ವೇದ ವೈದ್ಯರ ಸೂಚನೆ ಕಡ್ಡಾಯ: ಸುಮಾರು 35 ಬಗೆಯ ಆಯುರ್ವೇದ ಔಷಧೀಯ ವಸ್ತುಗಳನ್ನು ಈ ಮಾತ್ರೆ ತಯಾರಿಸಲು ಬಳಸಲಾಗುತ್ತಿದ್ದು, ಇವುಗಳು ಕೊರೊನಾದ ವಿವಿಧ ಪ್ರಕಾರದ ವೈರಾಣುಗಳ ವಿರುದ್ಧ ಪ್ರಭಾವಶಾಲಿಯಾಗಿ ಬಳಕೆಯಾಗುತ್ತದೆ ಎನ್ನುವುದನ್ನೂ ಪ್ರಮಾಣೀಕರಿಸಲಾಗಿದೆ. ಕೋವಿಡ್ನ ಸಾಮಾನ್ಯ ಲಕ್ಷಣ ಹೊಂದಿರುವ ವ್ಯಕ್ತಿ ಅಥವಾ ಎ ಸಿಂಪ್ಟಮ್ ಹೊಂದಿರುವ ವ್ಯಕ್ತಿಯು ಪಾಸಿಟಿವ್ ವರದಿ ಬಂದ 7 ದಿನಗಳ ಬಳಿಕ ಈ ಆಯುಷ್-64 ಮಾತ್ರೆಯನ್ನು ಆಯುರ್ವೇದ ವೈದ್ಯರ ಸೂಚನೆಯ ಮೇರೆಗೆ ಸೇವಿಸಬಹುದಾಗಿದೆ. ಕೊರೊನಾದಿಂದ ಶ್ವಾಸಕೋಶದ ಸಮಸ್ಯೆಯು ಹೆಚ್ಚಾಗಿದ್ದು, ಈ ಸಮಸ್ಯೆಯನ್ನೂ ಪರಿಣಾಮಕಾರಿಯಾಗಿ ಗುಣಪಡಿಸುವ ಸಾಮರ್ಥ್ಯವನ್ನೂ ಇದು ಹೊಂದಿದೆ.
ಒಟ್ಟಾರೆ ಕೊರೊನಾ ಮಹಾಮಾರಿ ವಿರುದ್ಧ ರಾಜ್ಯದಲ್ಲಿಯೇ ಆಯುಷ್ ಮಾತ್ರೆ ಸಿದ್ಧವಾಗಿರುವುದು ಸಂತಸದ ವಿಚಾರ.
ಓದಿ: 90ರ ಹರೆಯದಲ್ಲೂ ಪರಿಸರ ಕಾಳಜಿ: ಇದು ಹುಬ್ಬಳ್ಳಿ ಮಲ್ಲಮ್ಮನ ಅರಣ್ಯ ಪ್ರೇಮ