ಸುಳ್ಯ (ದಕ್ಷಿಣ ಕನ್ನಡ): ಕಲಾವಿದನೋರ್ವನಿಗೆ ವಿಶಿಷ್ಟ ಕಲ್ಪನೆಯಿದ್ದಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಕಲಾಕೃತಿ ಮೂಡಲು ಸಾಧ್ಯ ಎಂಬುದಕ್ಕೆ ಈ ವಿಡಿಯೋ ಮತ್ತು ಈ ಯವಕ ನಿದರ್ಶನ. ಸುಳ್ಯದ ಶಶಿ ಅಡ್ಕರ್ ಎಂಬ ಯುವಕ ಇಂಗು ಎಲೆ ಮತ್ತು ತೆಂಗಿನ ಗರಿ ಕಡ್ಡಿಯಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿಯೊಂದನ್ನು ರಚಿಸಿದ್ದಾನೆ.
ಇಂಗು ಎಲೆಯನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸಿ ಅದನ್ನು ಪೊರಕೆ ಕಡ್ಡಿಗೆ ಅಂಟಿಸಿ, ಬಳಿಕ ಮರಳು ತುಂಬಿದ ಬಕೆಟ್ನಲ್ಲಿ ಇಡಲಾಗಿದೆ. ಸಾಮಾನ್ಯವಾಗಿ ನೋಡುವಾಗ ಏನೋ ಐದು ಕಡ್ಡಿಗಳನ್ನು ಇಡಲಾಗಿದೆ ಎಂದು ಅನಿಸುತ್ತದೆ. ಆದರೆ ಒಂದು ವಿಭಿನ್ನ ಕೋನದಲ್ಲಿ ನೋಡಿದಾಗ ಸ್ವಾಮಿ ವಿವೇಕಾನಂದರ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ಸುಂದರವಾಗಿ ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆಯನ್ನು ನಿನ್ನೆಯಷ್ಟೇ ಆಚರಿಸಲಾಗಿದ್ದು, ಈ ಶುಭ ಸಂದರ್ಭಕ್ಕಾಗಿ ಕಲಾವಿದ ಶಶಿ ಅಡ್ಕರ್ ಈ ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಾರೆ.
ಓದಿ:ಸುಳ್ಯ ಶಾಸಕ ಎಸ್.ಅಂಗಾರಗೆ ಸಚಿವ ಸ್ಥಾನ: ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ
ಸುಮಾರು ಐದು ಗಂಟೆಗಳ ಪರಿಶ್ರಮದಿಂದ ಈ ಕಲಾಕೃತಿ ಸೃಷ್ಟಿಯಾಗಿದೆ. ಮೊದಲಿಗೆ ವಿವೇಕಾನಂದರ ಚಿತ್ರವನ್ನು ಡ್ರಾಯಿಂಗ್ ಮಾಡಿ, ಅದೇ ರೀತಿಯಲ್ಲಿ ಇಂಗಿನ ಎಲೆಯನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸಿ ತೆಂಗಿನ ಗರಿ ಕಡ್ಡಿಗಳಿಗೆ ಅಂಟಿಸಲಾಗಿದೆ. ಹೀಗೆ ಅಂಟಿಸಲಾದ ಕಡ್ಡಿಗಳನ್ನು ಎದುರು-ಬದುರಾಗಿ ಮರಳು ತುಂಬಿಸಿದ ಬಕೆಟ್ನಲ್ಲಿ ನೇರವಾಗಿ ನಿಲ್ಲಿಸಲಾಗಿದೆ ಎಂದು ಶಶಿ ಅಡ್ಕರ್ ಹೇಳುತ್ತಾರೆ.
ವಿವೇಕಾನಂದರ ಈ ಕಲಾಕೃತಿ ರಚಿಸಲು ಶಶಿ ಅಡ್ಕರ್ ಅವರಿಗೆ ವಿದೇಶಿ ಕಲಾಕಾರರೊಬ್ಬರ ನಟ್ ಬೋಲ್ಟ್ನಿಂದ ರಚಿಸಿದ ಕಲಾಕೃತಿ ಪ್ರೇರಣೆಯೆಂದು ಹೇಳುತ್ತಾರೆ. ಈ ರೀತಿಯಲ್ಲಿ ರಚಿಸಿರುವ ಸ್ವಾಮಿ ವಿವೇಕಾನಂದರ ಕಲಾಕೃತಿಯನ್ನು ಸುಂದರವಾಗಿ ಚಿತ್ರೀಕರಿಸಿ, ಅವರ ಚಿಕಾಗೋ ಭಾಷಣದ ಮಾತನ್ನು ಹಿನ್ನೆಲೆ ಧ್ವನಿಯಾಗಿ ಹಾಕಲಾಗಿದೆ. ಇದು ನೋಡುಗರ ಗಮನ ಸೆಳೆಯುತ್ತಿದೆ.