ಮಂಗಳೂರು: ತಮ್ಮನ ಬಂಧನ ವಿಚಾರವಾಗಿ ಉಳ್ಳಾಲ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾನೆ.
ಘಟನೆಯ ವಿವರ:
ತನ್ನ ಮೇಲೆ ವಿನಾ ಕಾರಣ ಉಳ್ಳಾಲ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಶಹ್ವನ್ (25) ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾನೆ. ದೂರಿನಲ್ಲಿ ಅವರು ನಿನ್ನ ತಮ್ಮ ಸಫ್ವಾನ್ ಪೊಲೀಸ್ ವಾಹನಕ್ಕೆ ಕಲ್ಲು ತೂರಿದ್ದಾನೆ. ಅವನನ್ನು ಕೂಡಲೇ ಕರೆದುಕೊಂಡು ಬರಬೇಕೆಂದು ಉಳ್ಳಾಲ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾನೆ.
ಮೇ 31ರಂದು ಮಧ್ಯಾಹ್ನ 1.30ರ ಸುಮಾರಿಗೆ ಕರೆ ಮಾಡಿ ಮುಕ್ಕಚ್ಚೇರಿ ಇನ್ ಲ್ಯಾಂಡ್ ಪ್ಲ್ಯಾಟ್ಗೆ ಬರಲು ತಿಳಿಸಿದ್ದಾರೆ. ಅದರಂತೆ ತಾನು ಅಲ್ಲಿಗೆ ತೆರಳಿದಾಗ ರಂಜಿತ್ ಹಾಗೂ ಇನ್ನೋರ್ವ ಪೊಲೀಸ್ ಏಕಾಏಕಿ ಹೊಡೆಯಲು ಆರಂಭಿಸಿದ್ದಾರೆ. ಅಲ್ಲದೆ ನನ್ನ ಬೈಕ್ ಕೀ, ಮೊಬೈಲ್ ಫೋನ್ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೆ ಲಾಠಿ, ಬೂಟ್ ಕಾಲಿನಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ 'ನಿನ್ನ ತಮ್ಮ ಎಲ್ಲಿದ್ದಾನೆ?, ಆತ ಪೊಲೀಸ್ ವಾಹನಕ್ಕೆ ಕಲ್ಲು ಹೊಡೆದು ಹೋಗಿದ್ದಾನೆ. ನೀನೂ ಈ ಕೃತ್ಯದಲ್ಲಿ ಇದ್ದೀಯಾ' ಎಂದು ಮತ್ತೆ ಹೊಡೆದಿದ್ದಾರೆ.
ನನಗೆ ಈ ವಿಚಾರದ ಬಗ್ಗೆ ತಿಳಿದಿಲ್ಲ ಎಂದರೂ ಕೇಳದೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅದೇ ದಿನ ರಾತ್ರಿ 8 ಗಂಟೆಗೆ ಎಸ್ಐ ಪ್ರದೀಪ್ ನೇತೃತ್ವದ ಆರು ಮಂದಿ ಪೊಲೀಸರ ತಂಡ ನಮ್ಮ ಮನೆ ಮೇಲೆ ದಾಳಿ ನಡೆಸಿ ನನ್ನ ತಂದೆ ಹಾಗೂ ಹೆಂಗಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ನನ್ನ ತಂದೆ ನನ್ನ ತಮ್ಮ ಸಫ್ವಾನ್ ನನ್ನು ಬೆಳಗ್ಗೆ ಠಾಣೆಗೆ ಕರೆದುಕೊಂಡು ಬರುವುದಾಗಿ ಹೇಳಿದ ಬಳಿಕ ಪೊಲೀಸರು ಮನೆಯಿಂದ ವಾಪಸ್ ತೆರಳಿದ್ದಾರೆ. ಅಲ್ಲದೇ ಮರುದಿನ ತನ್ನ ತಮ್ಮನನ್ನು ಸ್ಟೇಷನ್ಗೆ ಕರೆ ತಂದ ಬಳಿಕ ತನ್ನನ್ನು ಬಿಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರಂತೆ. ಬಳಿಕ ತಂದೆಯವರು ತಮ್ಮ ಸಫ್ವಾನ್ ನನ್ನು ಕರೆತಂದ ಬಳಿಕ ತನ್ನನ್ನು ರಾತ್ರಿ 10.30ಗೆ ಠಾಣೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಹೊಡೆದ ಏಟಿನಿಂದ ಮಲ-ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗಿದ್ದು, ಮರುದಿನ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುತ್ತೇನೆ. ಉಳ್ಳಾಲ ಪೊಲೀಸರು ನಮ್ಮ ಮೇಲೆ ಹಳೆಯ ದ್ವೇಷ ಸಾಧಿಸುತ್ತಾರೆ ಎಂದು ಶಹ್ವನ್ ಆರೋಪಿಸಿದ್ದಾರೆ. ಎಸ್ಐ ಪ್ರದೀಪ್, ಪೊಲೀಸ್ ಕಾನ್ಸ್ಸ್ಟೇಬಲ್ ಅಕ್ಬರ್, ಸಾಗರ್, ರಂಜಿತ್, ರವಿ ಹಾಗೂ ಇನ್ನಿಬ್ಬರು ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ದೂರು ತನಗೆ ಬಂದಿದ್ದು, ಪರಿಶೀಲನೆ ನಡೆಸುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಫ್ವಾನ್ ನನ್ನು ಬಂಧಿಸಿ, ಐಪಿಸಿ ಸೆಕ್ಷನ್ 353 ಹಾಗೂ ಸಾಂಕ್ರಾಮಿಕ ರೋಗ ಹರಡುವ ಎನ್ಡಿಎಂಎ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.