ಮಂಗಳೂರು: ಖಾಸಗಿ ಚಾನೆಲ್ವೊಂದರ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಪುರೋಹಿತರು, ಜ್ಯೋತಿಷಿಗಳ ಬಗ್ಗೆ ಅವಹೇಳಕಾರಿಯಾಗಿ ವರ್ತಿಸಿದ್ದ ಕಲಾವಿದ ಅರವಿಂದ ಬೋಳಾರ್ ಅವರು ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ವಿಶ್ವಶ್ರೀಗೆ ಭೇಟಿ ನೀಡಿ ಕ್ಷಮೆಯಾಚನೆ ಮಾಡಿದ್ದಾರೆ.
ನನ್ನಿಂದ ಮಾತಿನಲ್ಲಿ ಪ್ರಮಾದವಾಗಿದೆ. ನನ್ನಿಂದ ತಪ್ಪಾಗಿದೆ. ಮುಂದೆ ಈ ರೀತಿಯ ಯಾವುದೇ ದೃಶ್ಯಗಳನ್ನು ನಾನು ಮಾಡುವುದಿಲ್ಲ ಎಂದು ಪರಿಷತ್ನ ಮುಖಂಡರಲ್ಲಿ ಕ್ಷಮೆ ಕೇಳಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ನ ಪ್ರಕಟಣೆ ತಿಳಿಸಿದೆ.
ಭಾನುವಾರ ರಾತ್ರಿ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ನಂದಳಿಕೆ V/S ಬೋಳಾರ ''ಬರೆದೀಪಿ ಜ್ಯೋತಿಷ್ಯ'' ಎನ್ನುವ ಕಾರ್ಯಕ್ರಮದಲ್ಲಿ ಪುರೋಹಿತರು, ಜ್ಯೋತಿಷಿಗಳ ಬಗ್ಗೆ ಮಾನಹಾನಿಕಾರಿಯಾಗಿ ವರ್ತಿಸಿ ಅವರಿಗೆ ಧಕ್ಕೆ ತರುವಂತೆ ಕೀಳು ಮಟ್ಟದಲ್ಲಿ ಅಪಪ್ರಚಾರ ಮಾಡಿ ಖಾಸಗಿ ಚಾನೆಲ್ನ ನಿರೂಪಕ ವಾಲ್ಟರ್ ನಂದಳಿಕೆ ಹಾಗೂ ಸಿನಿಮಾ ಕಲಾವಿದ ಅರವಿಂದ ಬೋಳಾರ್ ನಡೆದುಕೊಂಡಿದ್ದರು.
ಈ ಕುರಿತಂತೆ ನಗರದ ಕುಂಜತ್ ಬೈಲ್ ನಿವಾಸಿ ಶಿವರಾಜ್ ಎಂಬುವವರು, ಅತ್ಯಂತ ಕೀಳುಮಟ್ಟದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಾಲ್ಟರ್ ನಂದಳಿಕೆ ಹಾಗೂ ಸಿನಿಮಾ ಕಲಾವಿದ ಅರವಿಂದ ಬೋಳಾರ್ ವಿರುದ್ಧ ಈ ದೂರು ದಾಖಲಿಸಿದ್ದರು.
ಅಲ್ಲದೇ ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.
ಇದೀಗ ಕಲಾವಿದ ಅರವಿಂದ ಬೋಳಾರ್ ಅವರು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಾಲಯಕ್ಕೆ ಬಂದು ಕ್ಷಮೆಯಾಚಿಸಿದ್ದಾರೆ.