ಬೆಳ್ತಂಗಡಿ: ಗೋವುಗಳ ಹಿಂಡು, ಇನ್ನಿತರ ಪ್ರಾಣಿ ಪಕ್ಷಿಗಳ ಕಲರವದೊಡನೆ ವಿಸ್ತಾರವಾದ ಬಯಲಿನಲ್ಲಿ ಮರದ ಕೆಳಗೆ ಗೋ ಪಾಲಕರಿಂದಲೇ ಪೂಜಿಸಲ್ಪಟ್ಟ ಇಲ್ಲಿನ ಪ್ರಕೃತಿ ಪ್ರಿಯ ಗಣೇಶನಿಗೆ ಪ್ರಕೃತಿದತ್ತ ವಸ್ತುಗಳೆಂದರೆ ಬಲು ಇಷ್ಟ. ಬಂಧಮುಕ್ತನಾಗಿ ವಿಶಾಲವಾದ ಬಯಲಿನಲ್ಲೇ ವಿರಾಜಮಾನನಾಗಿ ಕುಳಿತ ಈ ಗಣಪನಿಗೆ ಇಲ್ಲಿ ಯಾವುದೇ ಗುಡಿ ಗೋಪುರಗಳಿಲ್ಲ.
ಮಡಿ ಮೈಲಿಗೆ, ಮೇಲು ಕೀಳುಗಳೆಂಬ ಭೇದ-ಭಾವವಿಲ್ಲದೆ ಯಾರಿಗೆ ಯಾವ ಹೊತ್ತಲ್ಲೂ ಕಷ್ಟ ನಿವೇದನೆ ಮಾಡಿಕೊಳ್ಳಲೆಂದೇ ಸ್ವಯಂ ತಾನೇ ಭವ-ಬಂಧನಗಳನ್ನು ಮೀರಿ ಪ್ರಕೃತಿಯ ಮಡಿಲಿನಲ್ಲಿ ಆವಿರ್ಭವಿಸಿ ಭಕ್ತ ಸಾಗರದ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿರುವ ಇಲ್ಲಿನ ಗಣೇಶನಿಗೆ ದೇಶ-ವಿದೇಶಗಳಲ್ಲೂ ಅಸಂಖ್ಯಾತ ಭಕ್ತರಿರುವುದು ಇಲ್ಲಿನ ದೇವರ ಮಹಿಮೆಗೆ ಸಾಕ್ಷಿ.
ಗೋವುಗಳನ್ನು ಮೇಯಿಸಲೆಂದು ಬಂದ ಗೋಪಾಲಕರು ಮನೆಯಲ್ಲಿ ಬೆಳೆಸಿದ ಸೌತೆಕಾಯಿಯನ್ನು ಜೊತೆಯಲ್ಲಿ ತಂದು ದೇವರಿಗೆ ಅರ್ಪಿಸಿ ಪೂಜೆ ಮಾಡುತ್ತಿದ್ದುದರಿಂದ ಈ ಕ್ಷೇತ್ರಕ್ಕೆ ಸೌತೆಪ್ರಿಯ ಗಣಪ ಎಂದು ಹೆಸರು ಬಂದಿದೆ. ಅಡ್ಕದಲ್ಲಿ ಅಂದರೆ ವಿಶಾಲವಾದ ಬಯಲಿನಲ್ಲಿ ನೆಲೆಸಿದ್ದ ಹಿನ್ನೆಲೆ ಸೌತ್ತಡ್ಕ ಎಂಬ ಹೆಸರು ಬಂದಿದೆ. ದೇವರ ಸಂಕಲ್ಪದಂತೆ ಇಲ್ಲಿ ದೇವಾಲಯ ನಿರ್ಮಿಸುವುದಿದ್ದರೂ ದೇವಳವು ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ಕಾಣಬೇಕು ಎಂಬ ಮಾತಿದೆ. ಅದು ಅಸಾಧ್ಯವಾದುದರಿಂದ ಬಯಲಿನಲ್ಲೇ ದೇವರಿಗೆ ಪೂಜೆ ನಡೆಯುತ್ತಿದೆ ಎಂಬುದು ಇಲ್ಲಿಯ ಸ್ಥಳ ಪುರಾಣ.
ಇದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ದೇವಸ್ಥಾನದ ಇತಿಹಾಸ. ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಭಕ್ತರು ತಮ್ಮ ಕಷ್ಷಗಳ ನಿವಾರಣೆಗಾಗಿ ದೇವರ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸಿ ಕಷ್ಟಗಳು ನಿವಾರಣೆಯಾದರೆ ಘಂಟೆ ಹರಕೆಯನ್ನೂ ಸಲ್ಲಿಸುವ ಸಂಕಲ್ಪ ಮಾಡಿಕೊಳ್ಳುತ್ತಾರೆ. ಸಂಕಷ್ಟ ನಿವಾರಣೆಯಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಭಕ್ತರು ಇಲ್ಲಿಗೆ ಬಂದು ಘಂಟೆ ಹರಕೆ ನೀಡುವುದು ವಿಶೇಷವಾಗಿದೆ. ಇಲ್ಲಿಯ ಇನ್ನೊಂದು ವಿಶೇಷ ಸೇವೆ ಎಂದರೆ ಅವಲಕ್ಕಿ ಪ್ರಸಾದ. ಇದು ಕೂಡ ದೇವರಿಗೆ ತುಂಬಾ ಇಷ್ಟದ ಹರಕೆಯಾಗಿದ್ದು, ಭಕ್ತರು ತನ್ನ ಕಷ್ಟ ನಿವಾರಣೆಗಾಗಿ ಈ ಹರಕೆಯನ್ನೂ ಸಲ್ಲಿಸುತ್ತಾರೆ.
ಮೂಡಪ್ಪ ಸೇವೆ ಗಣೇಶನಿಗೆ ಸಲ್ಲುವ ವಿಶೇಷ ಸೇವೆ. ಪ್ರತೀ ವರ್ಷ ಮಾಘ ಶುದ್ಧ ಚೌತಿಯಂದು ಶ್ರೀ ದೇವರಿಗೆ ಊರ, ಪರವೂರ ಭಕ್ತ ಮಹಾಜನರ ಸಹಕಾರದೊಂದಿಗೆ ರಾತ್ರಿ ಈ ವಿಶೇಷ ಸೇವೆ ನಡೆಯುತ್ತದೆ. ಶ್ರೀ ದೇವರ ಕಟ್ಟೆಯ ವಿಗ್ರಹದ ಸುತ್ತ ಗಣೇಶನಿಗೆ ಬಲು ಇಷ್ಟವಾದ ಕಬ್ಬುಗಳಿಂದ ಆವರಣವನ್ನು ಕಟ್ಟಿ ಅದರೊಳಗೆ ಅಕ್ಕಿ ತುಪ್ಪದಿಂದ ಮಾಡಿದ ಅಪ್ಪ ಕಜ್ಜಾಯವನ್ನು ಸುರಿದು ಮಹಾಗಣಪತಿಗೆ ಅಭಿಷೇಕ ಮಾಡಲಾಗುತ್ತದೆ. ವಿವಿಧ ಹೂವುಗಳಿಂದ ದೇವರನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಶ್ರೀ ದೇವರ ಕಟ್ಟೆ ಹಾಗೂ ಸುತ್ತಮುತ್ತಲ ಪರಿಸರವನ್ನು ಫಲ-ಪುಷ್ಪಗಳಿಂದ ಹಾಗೂ ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗುತ್ತದೆ. ದೇವರಿಗೆ ನಾನಾ ಭಕ್ಷ್ಯಗಳ ನೈವೇದ್ಯದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಗೋ ಪಾಲಕರೆಲ್ಲರೂ ಸೇರಿ ಗುಡಿ ಕಟ್ಟುವ ಯೋಚನೆಯಲ್ಲಿದ್ದಾಗ ಅವರ ಕನಸಿನಲ್ಲಿ ಮಹಾಗಣಪತಿ ಕಾಣಿಸಿಕೊಂಡು ಯಾವುದೇ ಕಾರಣಕ್ಕೂ ಇಲ್ಲಿ ಗುಡಿ ನಿರ್ಮಿಸಬಾರದು. ನಿರ್ಮಿಸುವುದಾದರೂ ಕಾಶಿ ವಿಶ್ವನಾಥನ ಸನ್ನಿಧಿಗೆ ಕಾಣುವಂತೆ ನಿರ್ಮಿಸಬೇಕು. ಅದೂ ಕೂಡ ಒಂದೇ ದಿನದಲ್ಲಿ ಕಟ್ಟಿ ಮುಗಿಸಬೇಕು ಎಂದು ಪ್ರಕೃತಿಪ್ರಿಯ ಗಣಪತಿಯ ಅಭಯ ಆಗುತ್ತದೆ. ಅದರೆ ಇದೆಲ್ಲ ಅಸಾಧ್ಯವಾದ ಕಾರಣ ಇಲ್ಲಿ ದೇವರಿಗೆ ಯಾವುದೇ ಗುಡಿ ಇಲ್ಲ. ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಮಹಾಗಣಪತಿಗೆ ಮೂಡಪ್ಪ ಸೇವೆ ತುಂಬಾ ವಿಶೇಷ ಪೂಜೆಯಾಗಿದೆ.
ಚೌತಿಗೆ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ತಮ್ಮ ಇಷ್ಟಾರ್ಥವನ್ನು ಇಡೇರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಮಾತ್ರ ಕೊರೊನಾದಿಂದಾಗಿ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಬರುವ ಭಕ್ತರೂ ಕೂಡ ಸರಿಯಾದ ಮುಂಜಾಗ್ರತೆ ವಹಿಸುಕೊಂಡು ಬರಬೇಕು. ಇಲ್ಲಿ ಕೂಡ ಸರ್ಕಾರದ ಸೂಚನೆಗಳನ್ನು ಸರಿಯಾಗಿ ಪಾಲಿಸಿಕೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅದಲ್ಲದೆ ಈ ಸಂದರ್ಭದಲ್ಲಿ ಕೆಲವು ಸೇವೆಗಳು ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.