ಮಂಗಳೂರು: ನೇತ್ರಾವತಿ ನದಿಗೆ ಹಾರಿ ಚಿಕ್ಕಮಗಳೂರು ಮೂಲದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವರ ಪುತ್ರ ಪ್ರಸನ್ನ ಕುಮಾರ್ (40 ವರ್ಷ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಪ್ರಸನ್ನ ಕುಮಾರ್ ತರಕಾರಿ, ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು. ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ವ್ಯಾಪಾರದ ಹಣ ಬವುದಿದೆ. ವಸೂಲಿ ಮಾಡಿಕೊಂಡು ಬರುತ್ತೇನೆ ಎಂದು ಮನೆಯವರಿಗೆ ಹೇಳಿ ಮಂಗಳೂರಿಗೆ ತೆರಳಿದ್ದರು. ಆದರೆ ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ನೇತ್ರಾವತಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಫೋಟೋ ತೆಗೆದು ಮಾಹಿತಿ ಹಂಚಿಕೊಂಡಿದ್ದರು.
ವಿವಾಹಿತರಾಗಿರುವ ಪ್ರಸನ್ನ ಕುಮಾರ್ ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಉತ್ತಮ ಆರ್ಥಿಕ ಹಿನ್ನೆಲೆ ಕೂಡ ಇದೆ. ಇತ್ತೀಚೆಗೆ ಅವರು ಹೊಸ ಮನೆಯನ್ನು ಕಟ್ಟಿಸಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಸನ್ನ ಕುಮಾರ್ ಪತ್ತೆಗಾಗಿ ಸೋಮವಾರ ಸಂಜೆವರೆಗೂ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆದಿದ್ದು, ಪತ್ತೆಯಾಗಿಲ್ಲ. ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ನಾಳೆ ಮತ್ತೆ ಹುಡುಕಾಟ ಮುಂದುವರೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು