ಉಳ್ಳಾಲ: ಕೊಲೆ ಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಪೊಲೀಸರನ್ನೇ ಯಾಮಾರಿಸಿ ಪೊಲೀಸ್ ಬೈಕ್‌ನಲ್ಲೇ ಪರಾರಿಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪಿನಲ್ಲಿ ನಡೆದಿದೆ.
ಕೊಲೆಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಉಳ್ಳಾಲದ ಆರೋಪಿಯೊಬ್ಬ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಬೆಂಗಳೂರಿಗೆ ಪರಾರಿಯಾಗಿದ್ದ. ಇತ್ತೀಚೆಗೆ ರಂಜಾನ್ ಹಬ್ಬಕ್ಕೆಂದು ಆತ ಊರಿಗೆ ಮರಳಿದ್ದ ಮಾಹಿತಿ ಪಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತನಗೆ ಸಹಕರಿಸಿದ ಮತ್ತೊಬ್ಬ ಆರೋಪಿಯ ಮಾಹಿತಿ ಕೊಡುವುದಾಗಿ ತಿಳಿಸಿದ್ದರಿಂದ ಇಬ್ಬರು ಪೊಲೀಸರು ಆತನನ್ನು ಮಂಗಳೂರಿನಿಂದ ಬೈಕ್‌ನಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ಉಳ್ಳಾಲದತ್ತ ಸಾಗಿದ್ದಾರೆ.
ಕಲ್ಲಾಪು ತಲುಪುತ್ತಿದ್ದಂತೆಯೇ ಆರೋಪಿ ದೂರದಲ್ಲಿ ಕಾಣುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನೇ ತನಗೆ ಸಹಕರಿಸಿದ ಆರೋಪಿ ಎಂದು ಪೊಲೀಸರಿಗೆ ತೋರಿಸಿದ್ದಾನೆ. ಅವನ ಮಾತು ನಂಬಿದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಬೈಕಿನಿಂದ ಇಳಿದು ಹೋಗುವಾಗ ಬೈಕ್ ಕೀಯನ್ನು ಬೈಕ್‌ನಲ್ಲಿ ಇರಿಸಿದ್ದರು. ಕಲ್ಲಾಪಿನಲ್ಲಿದ್ದ ವ್ಯಕ್ತಿಯನ್ನು ಸೆರೆಹಿಡಿಯುವುದಕ್ಕೆ ಇಬ್ಬರು ಪೊಲೀಸರು ಮುಂದಾಗುತ್ತಿದ್ದಂತೆ ಆರೋಪಿ ತಕ್ಷಣ ಬೈಕ್ ಸ್ಟಾರ್ಟ್ ಮಾಡಿ ಉಳ್ಳಾಲ ಕಡೆಗೆ ಪರಾರಿಯಾಗಿದ್ದಾನೆ.
ಆರೋಪಿ ಪೊಲೀಸ್ ಬೈಕ್ ಅನ್ನು ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ಬಿಟ್ಟುಹೋಗಿದ್ದಾನೆ. ಪೊಲೀಸರು ಕಲ್ಲಾಪು ಬಳಿ ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಆರೋಪಿಯಲ್ಲ, ಅಮಾಯಕ ಎಂಬುದು ಸಾಬೀತಾಗಿದೆ. ಆರೋಪಿಗಾಗಿ ಪೊಲೀಸರು ಮತ್ತೆ ಹುಡುಕಾಟ ಮುಂದುವರಿಸಿದ್ದಾರೆ.