ದಕ್ಷಿಣ ಕನ್ನಡ: ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರು ಸಂಚರಿಸುತ್ತಿದ್ದ ಎರಡು ಲಾರಿಗಳನ್ನು ಜಿಲ್ಲೆಯ ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ವಲಸೆ ಕಾರ್ಮಿಕರು ತಮ್ಮನ್ನು ಉತ್ತರ ಭಾರತಕ್ಕೆ ಹೋಗಲು ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರು. ಬಳಿಕ ಪುತ್ತೂರು ಎಸಿ ಡಾ. ಯತೀಶ್ ಉಲ್ಲಾಳ್ ಆಗಮಿಸಿ, ಮಾನವೊಲಿಸಿದ ಬಳಿಕ ಕಾರ್ಮಿಕರಿಗೆ ಮಂಗಳೂರಿನಲ್ಲಿಯೇ ತಂಗಲು ವ್ಯವಸ್ಥೆ ಕಲ್ಪಿಸಿ ಎಲ್ಲಾ ಮೂರು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಕಾರ್ಮಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಬೆಳಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರಿನಿಂದ ಸುಮಾರು 120 ಮಂದಿ ಕಾರ್ಮಿಕರು ಎರಡು ಗೂಡ್ಸ್ ಲಾರಿಗಳಲ್ಲಿ ಬೆಂಗಳೂರು ಮೂಲಕ ತವರಿಗೆ ಮರಳಲು ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬಂದಿದ್ದರು. ಬೆಳಗಿನ ಜಾವ ಸುಮಾರು 4 ಗಂಟೆಗೆ ಪೊಲೀಸರು ವಶಪಡಿಸಿಕೊಂಡರು.