ಮಂಗಳೂರು(ದಕ್ಷಿಣ ಕನ್ನಡ): ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-2(ಪೋಕ್ಸೊ) ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪಚ್ಚನಾಡಿ ವೈದ್ಯನಾಥ ನಗರದ ನವೀನ್ ಅಲಿಯಾಸ್ ನವೀನ್ ಪೂಜಾರಿ ಅಲಿಯಾಸ್ ನವೀನ್ ಸುವರ್ಣ(42) ಶಿಕ್ಷೆಗೊಳಗಾದ ಅಪರಾಧಿ. ಪ್ರಕರಣದಲ್ಲಿ ಇತರ ಮೂವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿ ಆದೇಶಿಸಲಾಗಿದೆ.
ಪ್ರಕರಣ: ಬಾಲಕಿ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಸಂದೀಪ್ ಕುಲಾಲ್ ಎಂಬಾತನೊಂದಿಗೆ ಪ್ರೇಮ ಹೊಂದಿದ್ದಳು. ಅವರಿಬ್ಬರು ಜೊತೆಯಲ್ಲಿರುವುದನ್ನು ನೋಡಿದ್ದ ನವೀನ್ ಸುವರ್ಣ ಎಂಬಾತ ಬಾಲಕಿಯ ಈ ವಿಚಾರವನ್ನು ಹೊರಗೆ ತಿಳಿಸುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. 2017 ಆಗಸ್ಟ್ 16 ರಂದು ಮಧ್ಯಾಹ್ನ 2ಗಂಟೆಗೆ ಆಕೆಯನ್ನು ಬೆದರಿಸಿ ತನ್ನ ಪರಿಚಯದ ಸುಧಾ ಎಂಬವರ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ಆ ಬಳಿಕ ನಿರಂತರವಾಗಿ ನವೆಂಬರ್ ಕೊನೆಯ ವರೆಗೂ ಆಗಿಂದಾಗ್ಗೆ ಈ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ.
ಇಷ್ಟೆ ಅಲ್ಲದೇ ದಾವಣಗೆರೆಯ ಹರಪನಹಳ್ಳಿ ಮಾಚಿಹಳ್ಳಿ ತಾಂಡಾ ಮೂಲದ ಹಾಗೂ ವಾಮಂಜೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಪುನೀತ್ ಕುಮಾರ್ ಕೂಡಾ ಬಾಲಕಿಯನ್ನು ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಬಾಲಕಿ ಗರ್ಭಿಣಿಯಾಗಿದ್ದು ಆಸ್ಪತ್ರೆಗೆ ಹೋದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು ಹಿನ್ನೆಲೆಯಲ್ಲಿ ಸಂದೀಪ್ ಕುಲಾಲ್ ಸಹಿತ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿತ್ತು.
51 ಸಾಕ್ಷಿ ನೀಡಿದ ಪೊಲೀಸ್: ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಬಳಿಕ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಿದಾಗ ಅದು ನವೀನ್ ಸುವರ್ಣನ ಜೊತೆ ತಾಳೆಯಾಗಿತ್ತು. ಇದರಿಂದ ಆತ ಅತ್ಯಾಚಾರ ಎಸಗಿದ್ದು ದೃಢಪಟ್ಟಿತು. ಪ್ರಕರಣದ ತನಿಖೆ ಕೈಗೊಂಡಿದ್ದ ಗ್ರಾಮಾಂತರ ಇನ್‌ಸ್ಪೆಕ್ಟರ್ ಸಿದ್ದನಗೌಡ ಎಚ್. ಬಜಂತ್ರಿ ಅವರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಒಟ್ಟಾರೆ 51 ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು 21 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿ ತೀರ್ಪು ನೀಡಲಾಗಿದೆ.
ತೀರ್ಪು: ವಿಚಾರಣೆ ಕೈಗೊಂಡ ಹೆಚ್ಚುವರಿ ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-2(ಪೋಕ್ಸೊ) ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಐಪಿಸಿ 376 ಹಾಗೂ ಪೋಕ್ಸೊ ಕಾಯ್ದೆ ಸೆಕ್ಷನ್ 6ರಡಿ ಆರೋಪಿ ನವೀನ್ ಸುವರ್ಣನಿಗೆ ಹತ್ತು ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದರು. ಉಳಿದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಸರಕಾರದ ಪರ ಸಾರ್ವಜನಿಕ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ಅವರು ವಾದಿಸಿದರು.
ಇದನ್ನೂ ಓದಿ: ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ