ಚಿತ್ರದುರ್ಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿರುವುದು ಅವರ ವೈಯಕ್ತಿಕ ವಿಚಾರ. ನಾನು ಅ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ನಡೆದ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿರುವುದು ಪಕ್ಷದ ವಿಚಾರವಲ್ಲ, ವೈಯಕ್ತಿಕ ವಿಚಾರ ಎಂದರು.
ಹಿರಿಯೂರು ಕ್ಷೇತ್ರದಲ್ಲಿ ಗಾಲಿ ಜನಾರ್ದನ ರೆಡ್ಡಿ ಸ್ಪರ್ಧಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರಾ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿರಿಯೂರು ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಆದರೆ ಎಲ್ಲರಿಗೂ ಮುಕ್ತವಾಗಿ ರಾಜಕಾರಣ ಮಾಡಲು ಸ್ವಾತಂತ್ರ್ಯವಿದೆ. ಈಗಾಗಲೇ ನಮ್ಮ ಶಾಸಕರು ಭಾಗದಲ್ಲಿದ್ದಾರೆ. ರೆಡ್ಡಿ ಹಿರಿಯೂರಿಗೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಿರಿಯೂರಿನಲ್ಲಿ ಜನಾರ್ದನ ರೆಡ್ಡಿ ಚುನಾವಣೆಗೆ ನಿಲ್ಲುವ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಾ ಮಾಧ್ಯಮದವರ ಪ್ರಶ್ನೆಗೆ ತೆರೆ ಎಳೆದರು.
ಇನ್ನು ನಿನ್ನೆಯ ದಿನ ಸಿಎಂ ಯಡಿಯೂರಪ್ಪ ಮಂಡಿಸಿದ ಬಜೆಟ್ ಜನಪರ ಬಜೆಟಾಗಿದೆ. ಆದ್ರೆ ಹಿಂದುಳಿದ, ದಲಿತರ, ತುಳಿತಕ್ಕೊಳಗಾದವರ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಅಸಮಾಧಾನವಿದೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೂ ಪರಿಹಾರ ನೀಡಿ: ಶಾಸಕ ರಾಜೇಗೌಡ
ತುಳಿತಕ್ಕೂಳಗಾದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ದಲಿತರಿಗೆ, ಮೀಸಲಾತಿ ವಿಶೇಷ ಘೋಷಣೆಗಳಲ್ಲಿ ಹೆಚ್ಚು ಆದ್ಯತೆ ಕಾಣಿಸಲಿಲ್ಲ. ಮುಖ್ಯಮಂತ್ರಿಗಳು ಸಮಾಜಿಕ ಕಳಕಳಿಯುಳ್ಳವರು. ಆಗಿರುವ ಅನ್ಯಾಯ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ. ನಾನು ಕೂಡ ಸಿಎಂ ಭೇಟಿ ಮಾಡಿ ಚರ್ಚೆ ಮಾಡುವೆ ಎಂದು ತಿಳಿಸಿದರು.