ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ಭೇಟಿ ನೀಡಿದ್ದು, ತಮ್ಮ ಪತ್ನಿಗೆ ಹಿರಿಯೂರು ಕ್ಷೇತ್ರ ಆಯ್ಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಹಿರಿಯೂರಿನ ತೋಟದ ಮನೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಹಾಲಿ, ಮಾಜಿ ನಗರ ಸಭೆ ಸದಸ್ಯರೊಂದಿಗೆ ಜನಾರ್ದನ ರೆಡ್ಡಿ ಸಭೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಕ್ರಿಕೆಟ್ ಟೂರ್ನಮೆಂಟ್ ಹಾಗೂ ದೇವಾಲಯಕ್ಕೆ ಭೇಟಿ ಹೆಸರಿನಲ್ಲಿ ಹಿರಿಯೂರು ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಭೇಟಿ ನೀಡುತ್ತಿರುವುದು ಮತ್ತೆ ರಾಜಕೀಯ ಅಖಾಡ ಪ್ರವೇಶಿಸಲು ರೆಡ್ಡಿ, ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರಾ ಎಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಗಣಿ ಧಣಿ ಜನಾರ್ದನ ರೆಡ್ಡಿ ಸ್ಥಳೀಯ ಲೀಡರ್ಗಳ ಮೂಲಕ ಸಂಘಟನೆ ಬಲ ಪಡಿಸುತ್ತಿದ್ದು, ಬಳ್ಳಾರಿ ವಿಭಜನೆಯಿಂದ ಬೇಸರಗೊಂಡ ರೆಡ್ಡಿಗಳ ಕಣ್ಣು ಕೋಟೆನಾಡಿನ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಹಿರಿಯೂರು ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಪತ್ನಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೀತಾ ಇದೆಯಾ? ಅಥವಾ ಜನಾರ್ದನ ರೆಡ್ಡಿ ಅವರೇ ರೀ ಎಂಟ್ರಿ ಕೊಡುತ್ತಾರಾ ಎಂಬ ಹಲವಾರು ಪ್ರಶ್ನೆಗಳು ರಾಜಕೀಯ ಚಿಂತಕರಲ್ಲಿ ಮೂಡಿವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೂ ಮುನ್ನ ಕೋಟೆ ನಾಡಿನಲ್ಲಿ ರೆಡ್ಡಿ ರಣತಂತ್ರ ಹೂಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಈ ಬೆನ್ನಲ್ಲೇ ಸ್ಥಳೀಯ ಮುಖಂಡರೊಂದಿಗೆ ಜನಾರ್ದನ ರೆಡ್ಡಿ ಗೌಪ್ಯ ಸಭೆ ನಡೆಸುವುದು ಹಲವು ಚರ್ಚೆಗೆ ಗ್ರಾಸವಾಗಿದೆ.
ಓದಿ : ಅಭಿನಂದನಾ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ರೇಣುಕಾಚಾರ್ಯ