ಚಿತ್ರದುರ್ಗ: ಹಿರಿಯೂರು ಪಟ್ಟಣದ ನಗರಸಭೆ ಅಧಿಕಾರಿಗಳು ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ನಿರ್ಮೂಲನೆಗೆ ರಾಜ್ಯದಲ್ಲಿ ಅತಿ ಹೆಚ್ಚು ಬ್ಲೀಚಿಂಗ್ ಪೌಡರ್ ಹಿರಿಯೂರು ನಗರಸಭೆ ಅಧಿಕಾರಿಗಳು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ ಅವಧಿಯಲ್ಲಿ ಬ್ಲೀಚಿಂಗ್ ಪೌಡರ್ ಹಾಗೂ ಕ್ರಿಮಿನಾಶಕಗಳ ಹೆಸರಿನಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ನಗರಸಭೆ ಸದಸ್ಯರೇ ದೂರಿದ್ದಾರೆ.
ಇನ್ನು ಸುರಕ್ಷತ ಕ್ರಮಕ್ಕೆ 39.44 ಲಕ್ಷ ರೂ.ಗಳನ್ನ ಅಧಿಕಾರಿಗಳು ಹೇಗೆ ಖರ್ಚು ಮಾಡಿದರು ಎಂದು ಸದಸ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಪೌರಾಯುಕ್ತೆ ಹಾಗೂ ಲೆಕ್ಕಪರಿಶೋಧಕ, ಇನ್ನೋರ್ವ ಅಧಿಕಾರಿಯ ಮೇಲೆ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಅಗತ್ಯಕ್ಕೂ ಮೀರಿ ಕ್ರಿಮಿ ನಾಶಕ ಖರೀದಿಗೆ ಕಡಿಮೆ ಬೆಲೆ ಕೊಟ್ಟು ಖರೀದಿಸಿ, ದುಬಾರಿ ಬಿಲ್ ತೋರಿಸಿ ಹಣ ಲಪಟಾಯಿಸಿದ್ದಾರೆ ಎಂದು ನಗರಸಭೆ ಸದಸ್ಯರು ಆರೋಪಿಸಿದ್ದಾರೆ.
ಓದಿ : ಮಕ್ಕಳ ಹಾಜರಾತಿಗೆ ಶಿಕ್ಷಣ ಇಲಾಖೆಯಿಂದ ನೂತನ ಕ್ರಮ!
ಈ ಕುರಿತು ಪೌರಾಯುಕ್ತೆ ಟಿ. ಲೀಲಾವತಿ ಅವರನ್ನು ಕೇಳಿದರೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲವೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ನಾನು ತಪ್ಪು ಮಾಡಿದ್ದರೆ ನನ್ನ ಮೇಲೆ ಕ್ರಮ ಜರುಗಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.