ಚಿತ್ರದುರ್ಗ: ಬಡ ರೈತರು ಕೃಷಿಯಲ್ಲಿ ಪ್ರಗತಿ ಸಾಧಿಸಲಿ ಎಂದು ಸರ್ಕಾರ ಹಲವು ಯೋಜನೆಗಳನ್ನ ಜಾರಿ ಮಾಡಿದೆ. ಅದರಂತೆ ನೀರಾವರಿಗಾಗಿ ಸರ್ಕಾರ ರೈತರಿಗೆ ಬೋರ್‌ವೆಲ್ ನೀಡಿದ್ರು, ಇತ್ತ ರಾಜಕೀಯ ಮುಸುಕಿನ ಕಾದಾಟದಿಂದ ರೈತರು ಪರದಾಟ ನಡೆಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಕೋಟೆನಾಡಿನ ಹೊಳಲ್ಕೆರೆ ತಾಲೂಕಿನ ರೈತರು ಸದ್ಯ ಪರದಾಟ ನಡೆಸುತ್ತಿದ್ದಾರೆ. 2017-18ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿ ರೈತರನ್ನು ಗುರುತಿಸಲಾಗಿದೆ. ಆದ್ರೆ ಇದುವರಿಗೂ ಕೊಳವೆ ಬಾವಿ ಕೊರೆಯಲು ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ. ಫಲಾನುಭವಿಗಳಿಗೆ ಯೋಜನೆ ಹಣ ಬಿಡುಗಡೆಯಾಗಿಲ್ಲ ಎಂಬ ದೂರು ರೈತ ಮುಖಂಡರದ್ದಾಗಿದೆ. ಎಚ್.ಆಂಜನೇಯ ಅಧಿಕಾರ ಅವಧಿಯಲ್ಲಿ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಆದರೆ, ರಾಜಕೀಯ ತಾರತಮ್ಯದಿಂದ ಕೆಲವು ರೈತರಿಗೆ ಯೋಜನೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇತ್ತ ಈ ಎಲ್ಲ ಸಮಸ್ಯೆಗಳಿಗೆ ರಾಜಕೀಯ ಪಕ್ಷ ಬೇಧ ಕಾರಣ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶಿವಕುಮಾರ ಆರೋಪ ಮಾಡುತ್ತಿದ್ದಾರೆ. ಅಂದು ಆಂಜನೇಯ ಜಾರಿ ಮಾಡಿದ ಯೋಜನೆಗಳಿಗೆ ಇಂದು ಶಾಸಕರು ತಡೆ ಹಿಡಿದ್ದಿದ್ದಾರೆ. ಹೀಗಾಗಿ ರೈತರು ಪರದಾಡುವಂತಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು 2017-18 ಸಾಲಿನಲ್ಲಿ ಹೊಳಲ್ಕೆರೆ ತಾಲೂಕಿನ ನೂರಾರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ರಾಜಕೀಯ ಮುಸುಕಿನ ಗುದ್ದಾಟಕ್ಕೆ ಬೋರ್‌ವೆಲ್ ಕೊರೆಸಲು ಬಿಡುತ್ತಿಲ್ಲ ಎಂಬ ಆರೋಪ ಫಲಾನುಭವಿಗಳು ಮಾಡುತ್ತಿದ್ದಾರೆ. ಇದಲ್ಲದೇ, ಎಚ್ ಆಂಜನೇಯ ಅವಧಿಯ ಕೆಲವು ಯೋಜನೆಗಳನ್ನು ಸಂಪೂರ್ಣಗೊಳಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇತ್ತ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳು ಕಚೇರಿ ಸುತ್ತಾಡಿ ಸುಸ್ತಾಗಿದ್ದಾರಂತೆ. ಇದುವರಿಗೂ ಸ್ಪಂದನೆ ಸಿಕ್ಕಿಲ್ಲ ಎಂಬುದು ರೈತರ ಆರೋಪ.
ಇನ್ನು ಈ ಕುರಿತು ಸಂಸದ ನಾರಾಯಣಸ್ವಾಮಿ ಬಳಿ ಕೇಳಿದ್ರೆ, ಪಕ್ಷದ ಆಧಾರದ ಮೇಲೆ ಯಾವ ರೈತರಿಗೂ ಶಾಸಕರು ಅನ್ಯಾಯ ಮಾಡುವುದಿಲ್ಲ. ಕೆಲವರು ಕೋರ್ಟ್‌ನಲ್ಲಿ ತಡೆ ತಂದಿದ್ದಾರೆ. ಬರುವ ದಿನಗಳಲ್ಲಿ ಸರಿಪಡಿಸಿ ರೈತರಿಗೆ ನೀರು ನೀಡುತ್ತೇವೆ ಎಂದಿದ್ದಾರೆ.