ಚಿತ್ರದುರ್ಗ: ಈಟಿವಿ ಭಾರತ ವರದಿಯಿಂದ ಚಿತ್ರದುರ್ಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಲಾಕ್ ಡೌನ್ ನಿಂದ ವಿನಾಯತಿ ನೀಡಿ ಆಯಾ ಜಿಲ್ಲೆ, ಹೊರ ರಾಜ್ಯಗಳ ಮಾರುಕಟ್ಟೆಗೆ ಕೊಂಡೊಯ್ಯಲು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಆದೇಶಿಸಿದ್ದಾರೆ.
ಕೊರೊನಾ ವೈರಸ್ ತಡೆಗೆ ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ದಿನ ಕಟಾವಿಗೆ ಬಂದ ಕರ್ಬೂಜ ಹಣ್ಣು ಮಾರುಕಟ್ಟೆಗೆ ಕೊಂಡೊಯ್ಯಲಾಗದೇ ಹಾನಿಯಾಗಿ ರೈತರು ಸಂಕಷ್ಷಕ್ಕೆ ಸಿಲುಕಿದ್ದ ಸುದ್ದಿ ಈಟಿವಿ ಭಾರತದಲ್ಲಿ ಪ್ರಕಟವಾಗಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಚಿತ್ರದುರ್ಗ ಜಿಲ್ಲಾಡಳಿತ ಇದೀಗ ಆದೇಶವನ್ನು ಹೊರಡಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರೈತ ಎಂ.ಜಯಣ್ಣ 3 ಎಕರೆ ಜಮೀನಿನಲ್ಲಿ ಬೆಳೆದಿರುವ ಸುಮಾರು 40 ಟನ್ ಕರ್ಬೂಜ ಹಾನಿಯಾಗಿತ್ತು. ಇತ್ತ 4 ಎಕರೆಯಲ್ಲಿ ಸುಮಾರು 50 ಟನ್ ಕರ್ಬೂಜ ಬೆಳೆದಿರುವ ರೈತ ತಿಪ್ಪೇಸ್ವಾಮಿ ಮಾರುಕಟ್ಟೆಗೆ ತಡಗೆದುಕೊಂಡು ಹೋಗಲಾಗದೆ ನಷ್ಟವಾಗಿತ್ತು. ಹೀಗಾಗಿ ರೈತರು ಸರ್ಕಾರದಿಂದ ಬೆಳೆನಷ್ಟ ಪರಿಹಾರಕ್ಕೆ ನೀಡಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದೀಗ ಜಿಲ್ಲಾಡಳಿತ ರೈತರ ಕೂಗಿಗೆ ಸ್ಪಂದಿಸಿದೆ.