ಚಿಕ್ಕಮಗಳೂರು : ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು 66 ಸ್ಥಾನ ಗೆದ್ದಿದ್ದಾರೆ. ಇದೇ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದರೆ, 37 ಸ್ಥಾನಕ್ಕೆ ಬರುವುದು ಪಕ್ಕಾ ಎಂದು ಸಚಿವ ಮಧು ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಪ್ರವಾಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ, ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಪಕ್ಷ ನಾಯಕ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯ ಅವರದ್ದು ಬೋಗಸ್ ಜನತಾ ದರ್ಶನ ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅನುಭವದ ಕೊರತೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕರಾಗಿ ವಾರವೂ ಕಳೆದಿಲ್ಲ, ಬಿಜೆಪಿಗೆ ಆರು ತಿಂಗಳು ರಜೆ ಕೊಟ್ಟಿದ್ದರು, ಈಗ ರಜೆಯ ಮೂಡ್ನಿಂದ ಹೊರ ಬಂದು ಹೀಗೆ ಮಾತಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿದೆ. ಇಂತಹ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಲೇವಡಿ ಮಾಡಿದರು.
ಸಿಎಂ ಹೇಳಿದಂತೆ ಎಲ್ಲ ಶಾಲೆಗಳಿಗೆ ಉಚಿತ ವಿದ್ಯುತ್, ನೀರು: ಸಿಎಂ ಸಿದ್ದರಾಮಯ್ಯ ಹೇಳಿರುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಕುಡಿಯುವ ನೀರನ್ನು ಕೊಡುವುದಕ್ಕೆ ತೀರ್ಮಾನ ಮಾಡಲಾಗಿದೆ. ವಿಧಾನಸಭೆ ಅಧಿವೇಶನದ ವರೆಗೆ ಕೆಲವು ರೂಪು -ರೇಷೆಗಳನ್ನು ಮಾಡಿಕೊಳ್ಳುತ್ತೇವೆ. ಮುಂದೆ ಕೂಡ ಕಂಪ್ಯೂಟರ್ ಲ್ಯಾಬ್ಗಳನ್ನು ಹೆಚ್ಚು ಮಾಡುತ್ತೇವೆ. ಈ ಸಂದರ್ಭದಲ್ಲೂ ಯಾವುದೇ ಚಾರ್ಜ್ ಮಾಡುವುದಿಲ್ಲ. ಅನುದಾನಿತ ಶಾಲೆಗಳಲ್ಲಿಯೂ ಈ ರೀತಿ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಅದನ್ನು ಸಹ ಅಧಿವೇಶನದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಲ್ಪ ಸಂಖ್ಯಾತರ ಇಲಾಖೆಯ ಶಿಕ್ಷಕರ ಕುಟುಂಬ ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಳ್ಳಲು ಆಗಮಿಸಿತ್ತು. ಈ ವೇಳೆ ಶಿಕ್ಷಕರು ಮತ್ತು ಮಕ್ಕಳ ಜೊತೆ ಮಧು ಬಂಗಾರಪ್ಪ ಮಾತನಾಡಿ ವಿದ್ಯಾಭ್ಯಾಸದ ಕುರಿತು ಅವರನ್ನೆಲ್ಲ ವಿಚಾರಿಸಿದರು. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ನಿಮ್ಮ ಸಮಸ್ಯೆ ನನ್ನ ವ್ಯಾಪ್ತಿಗೆ ಬರಲ್ಲ. ಆದರೂ ನೀವು ಮನವಿ ಕೊಟ್ಟಿರುವುದರಿಂದ ನಿಮ್ಮ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ ಎಂದರು. ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೂಡಾ ನೀಡಿದರು.
ಇದನ್ನೂ ಓದಿ : ನಿಗಮ ಮಂಡಳಿ ನೇಮಕ ಸಂಬಂಧ ನನ್ನ ಅಭಿಪ್ರಾಯ ಕೇಳಿಲ್ಲ: ಸಚಿವ ಡಾ ಜಿ ಪರಮೇಶ್ವರ್