ಚಿಕ್ಕಮಗಳೂರು: ನಟ ಸಂಚಾರಿ ವಿಜಯ್ ನಿಧನ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಇದಕ್ಕೂ ಮುನ್ನ ಗ್ರಾಮದಲ್ಲಿ ಒಂದು ಗಂಟೆಗಳ ಕಾಲ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರದ ಸಿದ್ಧತೆ ನಡೆಸಲಾಗುತ್ತಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತಿಮ ವಿಧಿ ವಿಧಾನ ನಡೆಯಲಿದೆ. ಪಂಚನಹಳ್ಳಿಗೆ ಬಂದಾಗ ಇದೇ ತೋಟದಲ್ಲಿ ವಿಜಯ್ ಕಾಲ ಕಳೆಯುತ್ತಿದ್ದರು. ಕುಪ್ಪೂರು ಮಠದ ಮಠಾಧೀಶರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಇದರ ನಡುವೆ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ನೋಟಿಸ್ ನೀಡಿದ್ದು, ನಟ ಸಂಚಾರಿ ವಿಜಯ್ ಅಂತ್ಯ ಸಂಸ್ಕಾರದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ತಿಳಿಸಲಾಗಿದೆ.
ಮಾಧ್ಯಮದವರಿದ್ದರೆ ಜನ ಸೇರುತ್ತಾರೆ ಎಂಬ ಕಾರಣ ನೀಡಿ ನೋಟಿಸ್ ಜಾರಿ ಮಾಡಲಾಗಿದ್ದು, ಮೊನ್ನೆ ಸಚಿವರು ಬಂದಾಗ ಇಲ್ಲದ ಕೋವಿಡ್ ನಿಯಮ ನಟನ ಅಂತ್ಯಸಂಸ್ಕಾರಕ್ಕೆ ಅನ್ವಯ? ಅಗಲಿಲ್ವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ. ಆರೋಗ್ಯ ಸಚಿವ ಸಚಿವರು ಬಂದಾಗ ಕೋವಿಡ್ ನಿಯಮ ಉಲ್ಲಂಘನೆ ಆದ್ರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿತ್ತು.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ:
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರು, ಅಭಿಮಾನಿಗಳು ಮತ್ತು ಸಾರ್ವಜನಿಕರು ಅಗಲಿದ ನಟನ ಅಂತಿಮ ದರ್ಶನ ಪಡೆದರು.