ಚಿಕ್ಕಮಗಳೂರು : ಅಯ್ಯನಕೆರೆ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕೆರೆಗಳಲ್ಲೊಂದಾಗಿದೆ. ನಿಜಕ್ಕೂ ಒಂದು ಪ್ರವಾಸಿ ತಾಣ. ಈ ಹಿನ್ನೆಲೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಸ್ಥಳ ಪರಿಶೀಲಿಸಿದರು.
ಖುದ್ದು ತಾವೇ ಕೆರೆಯಲ್ಲಿ ವಿಹಾರ ಮಾಡಿ ಸಂಪೂರ್ಣ ಸ್ಥಳ ಪರಿಶೀಲಿಸಿದ ಸಚಿವ ಸಿ ಟಿ ರವಿ, ಏನೆಲ್ಲಾ ಅಭಿವೃದ್ಧಿ ಕಾರ್ಯಕ್ರಮ ಮಾಡಬಹುದು ಎಂಬುದರ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು. ಕೆರೆಯ ಸುತ್ತಮುತ್ತ ನಿಸರ್ಗ ಸೌಂದರ್ಯವನ್ನು ಹಾಗೆ ಉಳಿಸಿಕೊಂಡು ಹಾಗೂ ಕೆರೆಯ ಸುತ್ತ ಹೂವಿನ ಗಿಡಗಳನ್ನು ಬೆಳೆಸಿ ಅದರ ಅಂದ ಮತ್ತಷ್ಟು ಹೆಚ್ಚಿಸಬಹುದಾಗಿದೆ. ಶಕುನಗಿರಿ ಬೆಟ್ಟಕ್ಕೆ ಚಾರಣ ಬಲ್ಲಾಲೇಶ್ವರಾದಿಂದ ಜಿಪ್‌ಲೈನ್ ವ್ಯವಸ್ಥೆ, ಸೈಕ್ಲಿಂಗ್ ಟ್ರ್ಯಾಕ್ ಮಾಡುವಂತೆ ಸಲಹೆಗಳು ಬಂದಿದ್ದವು.
ಈ ಕುರಿತು ಎಲ್ಲಾ ರೀತಿಯ ಚರ್ಚೆ ಮಾಡಿ ಉತ್ತಮ ಪ್ರವಾಸಿ ತಾಣ ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ಹೇಳಿದರು. ವರ್ಷದ ಬಹುಪಾಲು ದಿನ ಕೆರೆಯಲ್ಲಿ ನೀರು ತುಂಬಿರುವ ಕಾರಣ ಜಲ ಸಾಹಸ ಕ್ರೀಡೆ, ಸೈಕ್ಲಿಂಗ್, ದೋಣಿ ವಿಹಾರ ಸೇರಿ ವಿವಿಧ ಮನೋರಂಜನಾ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ, ಇದನ್ನು ಉತ್ತಮ ಪ್ರವಾಸಿ ತಾಣ ಹಾಗೂ ಕ್ರೀಡಾ ಕೇಂದ್ರವನ್ನಾಗಿ ಮುಂದಿನ ದಿನಗಳಲ್ಲಿ ಮಾಡಲು ಯೋಜನೆ ರೂಪಿಸೋದಾಗಿ ಹೇಳಿದ್ದಾರೆ.
ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದಾಗ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತೆ ಇದೊಂದು ಜನಾಕರ್ಷಣೆಯ ಕೇಂದ್ರವಾಗಲಿದೆ. ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಜಲ ಸಾಹಸ ಕ್ರೀಡೆಗಳಿಗೆ ಸಂಬಂಧಿಸಿದಂತೆ ತರಬೇತಿ ಹಾಗೂ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಚಿತ್ರನಟಿ ರೇಖಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.