ಚಿಕ್ಕಮಗಳೂರು: ಯುವಕನಿಂದ ಚೂರಿ ಇರಿತಕ್ಕೊಳಗಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಯುವತಿ ನಿನ್ನೆ ಕೊನೆಯುಸಿರೆಳೆದಿದ್ದಾಳೆ.
ಕಳೆದ ನಾಲ್ಕು ದಿನಗಳ ಹಿಂದೆ ಬಾಳೆಹೊನ್ನೂರಿನ ಬಾಸಪುರು ಗ್ರಾಮದ ಯುವತಿಗೆ ಬಾಳೆಹೊನ್ನೂರಿನ ಸಮೀಪದ ಗಡಿಗೇಶ್ವರದ ಮಿಥುನ್ ಎಂಬ ಯುವಕ ಮನ ಬಂದಂತೆ ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದಿದ್ದ. ಕಳಸ ಹಾಗೂ ಬಾಳೆಹೊನ್ನೂರು ರಸ್ತೆ ಮಧ್ಯೆ ಬರುವ ಮಾಲಗೋಡು ರಸ್ತೆಯಲ್ಲಿ ರಾತ್ರಿ ಯುವತಿ ಮೇಲೆ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಸುಮಾರು 8ರಿಂದ 10 ಬಾರಿ ಚೂರಿ ಇರಿತಕ್ಕೊಳಗಾಗಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಗಂಭೀರವಾಗಿ ಗಾಯಗೊಂಡು ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದಾಗ ಸ್ಥಳೀಯರು ನೋಡಿ ಕಳಸ ಆಸ್ವತ್ರೆಗೆ ದಾಖಲು ಮಾಡಿದ್ದರು.
ಯುವತಿಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಯುವತಿಯನ್ನು ಹಾಸನಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಯುವತಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಾಲೇ ಇದ್ದಳು. ಆದರೆ ನಿನ್ನೆ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗಲೇ ಗುರುವಾರ ನೇರವಾಗಿ ಎನ್.ಆರ್ ಪುರ ತಾಲೂಕಿನ ನ್ಯಾಯಧೀಶರ ಮುಂದೆ ಆರೋಪಿ ಮಿಥುನ್ ಶರಣಾಗಿದ್ದ. ನ್ಯಾಯಾಧೀಶರು ಆರೋಪಿ ಮಿಥುನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದ್ದರು.
ಇನ್ನೊಂದೆಡೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ವತ್ರೆ ಮುಂಭಾಗದಲ್ಲಿ ಯುವತಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.