ಚಿಕ್ಕಮಗಳೂರು: ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮನವಿ ಪತ್ರ ನೀಡುವ ವೇಳೆ ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈರುಳ್ಳಿ ಹಾರ ಹಾಕಲು ಯತ್ನಿಸಿರುವ ಘಟನೆ ನಡೆದಿದೆ.
ಈರುಳ್ಳಿ, ಗ್ಯಾಸ್ ಹಾಗೂ ಇಂಧನ ಸೇರಿ ದೈನಂದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಈರುಳ್ಳಿ ಹಾರ ಹಾಕಿಕೊಂಡು ಪ್ರತಿಭಟಿಸುತ್ತಿದ್ದರು.
ಪಕೋಡ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದರು. ಈ ವೇಳೆ ಜಿಲ್ಲಾ ಪಂಚಾಯತ್‌ಗೆ ಸಂಸದೆ ಶೋಭಾ ಅವರು ಕಾರಿನಲ್ಲಿ ಬಂದರು. ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಹಿಡಿದು ಈರುಳ್ಳಿ ಹಾರ ಹಾಕಲು ಮುಂದಾದರು. ಆದರೆ, ಚಾಲಕ ಕಾರನ್ನ ಮುಂದೆ ಓಡಿಸಿದ್ದರಿಂದ ಈರುಳ್ಳಿ ಹಾರ ಕೆಳಕ್ಕೆ ಬಿತ್ತು.
ಜತೆಗೆ ಸಂಸದೆ ಶೋಭಾ ಅವರಿಗೆ ಮನವಿ ಪತ್ರ ನೀಡಲು ಪೊಲೀಸರು ಆಸ್ಪದ ನೀಡುತ್ತಿಲ್ಲ ಅಂತಾ ಪ್ರತಿಭಟನಾಕಾರರು ಪೊಲೀಸರ ಜತೆಗೆ ವಾಗ್ವಾದ ನಡೆಸಿದರು. ಜತೆಗೆ ಸಂಸದೆ ವಿರುದ್ಧ ಮಹಿಳಾ ಕಾಂಗ್ರೆಸ್ ನಾಯಕಿಯರು ಕಿಡಿ ಕಾರಿದರು.