ಚಿಕ್ಕಮಗಳೂರು : ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಿದ್ದಾರೆ. ಸದ್ಯಕ್ಕೆ ಅವರನ್ನು ತೆಗೆಯುವ ಸಂದರ್ಭ ಕಾಣುತ್ತಿಲ್ಲ. ವಿ ಸೋಮಣ್ಣ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯದಮದವರೊಂದಿಗೆ ಮಾತನಾಡಿದ ಅವರು, ಮುಂದೆ ಲೋಕಸಭೆ ಚುನಾವಣೆ ಇದೆ. ರಾಷ್ಟ್ರಾಧ್ಯಕ್ಷರ ತೀರ್ಮಾನ ಏನು ಎಂಬುದು ಗೊತ್ತಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಕಟೀಲ್ ರಾಜೀನಾಮೆ ವದಂತಿ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಈ ಬಗ್ಗೆ ಕೇಂದ್ರದ ನಾಯಕರು ಅಂಗೀಕಾರ ಮಾಡಬೇಕಲ್ವಾ. ಮುಂದೆ ಲೋಕಸಭೆ ಚುನಾವಣೆ ಇದೆ. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮಾಡಿ ಚುನಾವಣೆ ಎದುರಿಸುವುದು ಎಷ್ಟು ಸೂಕ್ತ ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸುತ್ತಾರೆ. ಅಲ್ಲಿಯವರೆಗೆ ರಾಜ್ಯಾಧ್ಯಕ್ಷರ ಪದವಿ ಖಾಲಿ ಇಲ್ಲ ಎಂದು ಹೇಳಿದ್ರು.
ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್ ಅವರು, ಡಿಕೆಶಿ ಸಿಎಂ ಅಲ್ಲ, ಆಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರದ್ದು ಒಂದು ರೀತಿ ಅತಿರೇಕದ ನಡೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ತನಗೆ ಸಿಎಂ ಸ್ಥಾನ ಸಿಗಲ್ಲ ಅನ್ನೋದು ಅವರಿಗೆ ಗ್ಯಾರಂಟಿ ಇದೆ. ನಾನೇ ಸಿಎಂ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. ಇದೇನು ಸಮ್ಮಿಶ್ರ ಸರ್ಕಾರವ ಎಂದು ಯಾರಿಗೆ ಹೇಳಿದ್ದಾರೆ. ಡಿಕೆಶಿಗೆ ಹೇಳಿದ್ದು ಎಂಬುದು ಜಗಜ್ಜಾಹೀರು. ಈಗಿನಿಂದಲೇ ಓವರ್ಟೇಕ್ ಮಾಡಿ ಏನಾದರೂ ಕಿರಿಕಿರಿ ಮಾಡಲು ಡಿಕೆಶಿ ಹೊರಟಿದ್ದಾರೆ. ಇವರ ಕಿರಿ ಕಿರಿ ಬೀದಿಗೆ ಬಂದರೆ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಟೀಕಿಸಿದರು. ಸಿಎಂ ಆದವರು ಹಿಂದಿನ ಸಿಎಂರನ್ನು ಭೇಟಿ ಮಾಡುವುದು ಮಾಮೂಲಿ. ನಾನು ಡಿಸಿಎಂ ಆಗಿದ್ದೆ, ಆದರೆ ನಿವೃತ್ತ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.
ವಿಪಕ್ಷನಾಯಕ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜುಲೈ 3ನೇ ತಾರೀಕು ವಿಪಕ್ಷ ನಾಯಕನನ್ನು ಘೋಷಣೆ ಮಾಡುತ್ತಾರೆ ಎಂದು ಆರ್. ಅಶೋಕ್ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡಿದ್ದೇನೆ.. ಸೋಮಣ್ಣ : ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಹೈಕಮಾಂಡ್ ನನಗೆ ನೀಡಿದ್ದ ಟಾಸ್ಕ್ನಲ್ಲಿ ಗೆದ್ದಿದ್ದೇನೆ. ಹಾಗಾಗಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದರು.
ವಿಜಯನಗರ ನಿವಾಸದಲ್ಲಿ ಮಾತನಾಡಿದ್ದ ಅವರು, ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ. ಪಕ್ಷದ ಸಂಘಟನೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ತೋರಿಸಿ ಕೊಡುತ್ತೇನೆ. ಎರಡು ಬಾರಿ ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಭೇಟಿ ಮಾಡಿ ಕೆಲ ಸಂಗತಿಗಳ ಬಗ್ಗೆ ಚರ್ಚಿಸಿದ್ದೇನೆ. ನಾನು 45 ವರ್ಷ ರಾಜಕಾರಣ ಮಾಡಿದ ಅನುಭವದ ಆಧಾರದ ಮೇಲೆ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದಿದ್ದರು.
ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ.. ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ: ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ