ಚಿಕ್ಕಬಳ್ಳಾಪುರ: ಮತದಾರರಿಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ದೇವರ ಫೋಟೋ ಮೇಲೆ ಅಣೆ ಪ್ರಮಾಣ ಮಾಡಿಸಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ವಿಧಾನ ಪರಿಷತ್ ಚುನಾವಣೆ ಹತ್ತಿರಬರುತ್ತಿದ್ದಂತೆ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಪಕ್ಷದ ಸ್ಥಳೀಯ ಲೀಡರ್ಗಳು ಬಾಗೇಪಲ್ಲಿ, ಗುಡಿಬಂಡೆ ತಾಲೂಕಿನ ಮತದಾರರನ್ನು ಸೇರಿಸಿ ತಮ್ಮ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಅಣೆ ಪ್ರಮಾಣ ಮಾಡಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಬಾಗೇಪಲ್ಲಿ ತಾಲೂಕಿನಲ್ಲಿ ಮತದಾರರಿಗೆ ದೇವರ ಫೋಟೋ ಮೇಲೆ ಮತದಾರರ ಕೈ ಹಿಡಿಸಿ ಪ್ರಮಾಣ ಮಾಡಿಸಿದ್ದಾರೆ. ಈ ವೇಳೆ ತಮ್ಮ ಅಭ್ಯರ್ಥಿ ಪರ 3ನೇ ನಂಬರ್ ಗುರುತಿಗೆ ಮತ ಹಾಕುತ್ತೇವೆಂದು ಮತದಾರರಿಂದ ಹೇಳಿಸಿ ಪ್ರಮಾಣ ಮಾಡಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಮತದಾರರಿಗೆ 75,000 ಹಣ ಹಾಗೂ ತಿರುಪತಿ ಲಡ್ಡು ವಿತರಿಸಿ ಮತಯಾಚನೆ ಮಾಡಿರುವ ಆರೋಪವು ಸಹ ಕೇಳಿಬಂದಿದೆ. ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ಹಣದ ಆಮಿಷದ ಮೂಲಕ ಸೆಳೆಯಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕರು ಈಗಾಗಲೇ ಗಂಭೀರ ಆರೋಪ ಮಾಡಿದ್ದು, ಈ ಘಟನೆ ಅದಕ್ಕೆ ಪುಷ್ಠಿ ನೀಡುವಂತಿದೆ.
ಇದನ್ನೂ ಓದಿ:ಕೆಜಿಎಫ್ ಬಾಬುರಿಂದ 115 ಕೋಟಿ ರೂ. ಭೂ ಕಬಳಿಕೆಯಾಗಿದೆ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ