ಬಾಗೇಪಲ್ಲಿ: ಕುಲ ಕಸುಬುಗಳನ್ನೇ ನಂಬಿ ಅದರಲ್ಲಿಯೇ ತೃಪ್ತಿ ಪಡೆದು ಹಳೆತನವನ್ನು ಹೊಸತನದಂತೆಯೇ ಮುಂದಿನ ಪೀಳಿಗೆಯವರಿಗೆ ಉದ್ಯೋಗ ಕಲಿಸಿಕೊಡುವ ಕುಲ ಕಸುಬುಗಳೀಗ ಒಂದೊಂದೇ ನಾಶವಾಗುತ್ತಿವೆ. ಕೆಲ ಕುಲ ಕಸುಬುಗಳು ಅವನತಿಯತ್ತ ಸಾಗುತ್ತಿವೆ.
ಕೃಷಿಕರ ಪ್ರಮಾಣ ಭಾರತದಲ್ಲಿ ಕಡಿಮೆಯಾಗುತ್ತಿದೆ. ತಲತಲಾಂತರದ ಕುಲ ಕಸುಬುಗಳು ನಶಿಸುತ್ತಿವೆ. ಅಂತಹ ಉದ್ಯೋಗಗಳಲ್ಲಿ ಕೊರವರ ಮತ್ತು ಅವರ ಪಂಗಡಗಳ ಕುಲ ಕಸುಬುಗಳೂ ಸೇರಿವೆ.
ಶ್ರಮದ ಬೆವರು ಬಸಿದು ತಯಾರಿಸಿದ ಬುಟ್ಟಿ, ಪೊರಕೆ, ಇತರೆ ವಸ್ತುಗಳನ್ನು ಮಾರಾಟ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಗಿರಾಕಿ ಬಂದಾಗ ಪೊರಕೆಗೆ 20 ರೂ. ಹೇಳಿದರೆ, 10 ರೂ.ಗೆ ಚೌಕಾಸಿ ಮಾಡುತ್ತಾರೆ. ಬುಟ್ಟಿ 100 ರೂ. ಹೇಳಿದರೆ 75ಕ್ಕೆ ಕೇಳುತ್ತಾರೆ. ಹೀಗೆ ವಸ್ತುಗಳನ್ನು ಮಾರಿ ಬಂದ ಹಣದಿಂದ ಇವರ ಜೀವನ ಸಾಗಬೇಕು. ಇವರಲ್ಲಿ ಹೆಚ್ಚಿನವರಿಗೆ ಜಮೀನು, ಆಸ್ತಿ-ಪಾಸ್ತಿ ಇಲ್ಲ. ಇದರಿಂದಲೇ ಇವರ ಜೀವನ ಸಾಗಬೇಕಾಗಿದೆ.
ಇನ್ನು ಸಾಂಪ್ರದಾಯಿಕ ಕೃಷಿಯನ್ನು ರೈತರು ಕೈ ಬಿಡುತ್ತಿದ್ದಾರೆ. ಇದರಿಂದ ಇವರಿಗೂ ಬೇಡಿಕೆ ಕಡಿಮೆಯಾಗುತ್ತದೆ. ಕೃಷಿ ಮತ್ತು ಕೃಷಿ ಮನೆತನದವರಿಗಾಗಿ ಇವರು ವಸ್ತುಗಳನ್ನು ತಯಾರಿಸಿಕೊಡುತ್ತಿದ್ದರು. ಆದರೆ ಅವರೇ ಸಾಂಪ್ರದಾಯಿಕ ಉದ್ಯೋಗ ಬಿಟ್ಟು ಆಧುನಿಕ ಕೃಷಿ ಮಾಡುತ್ತಿದ್ದಾರೆ. ಇದರಿಂದ ಇವರ ತಲತಲಾಂತರದ ಕುಲಕಸುಬು ಮರೆಯಾಗುತ್ತಿದೆ. ಬೇಡಿಕೆ ಇಲ್ಲದ ಕಾರಣ ಕುಲಕಸುಬು ಬಿಟ್ಟು ಇತ್ತೀಚೆಗೆ ಬೇರೆ ಉದ್ಯೋಗಳತ್ತ ಮುಖ ಮಾಡಿದ್ದಾರೆ.
ಮರೆಯಾಗಲು ಕಾರಣಗಳು:
- ಇತ್ತೀಚೆಗೆ ಬೇಡಿಕೆ ಕಡಿಮೆಯಾಗುತ್ತಿದೆ.
- ಸಾಂಪ್ರದಾಯಿಕ ಕೃಷಿ ಕಡಿಮೆಯಾಗಿರುವುದು.
- ಆಧುನಿಕ ಕೃಷಿಯ ಬೆಳವಣಿಗೆ.
- ಕೃಷಿಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದು.
- ಕಚ್ಛಾ ಸಂಪನ್ಮೂಲವೂ ಕಡಿಮೆ ಆಗುತ್ತಿರುವುದು.
- ಗ್ರಾಮೀಣರು ಆಧುನೀಕರಣಕ್ಕೆ ಮಾರು ಹೋಗಿರುವುದು.
- ಸರ್ಕಾರದ ಪ್ರೋತ್ಸಾಹ ಇಲ್ಲದಿರುವುದು.
- ಆಧುನಿಕತೆಯೇ ಇವರಿಗೆ ಸವಾಲು ಆಗಿರುವುದು.
- ಆಧುನಿಕ ವಸ್ತುಗಳ ಅಧಿಕ ಲಭ್ಯತೆ.
ಇವೇ ಮೊದಲಾದ ಕಾರಣಗಳಿಂದ ಇವರ ವಸ್ತುಗಳಿಗೆ ಮಹತ್ವ ಕಡಿಮೆ ಆಗಿದೆ.
ಇದನ್ನೂ ಓದಿ: ಕಾರವಾರ ಕ್ರೀಮ್ಸ್ನಲ್ಲಿ ಸಿದ್ಧಗೊಳ್ತಿದೆ ಆಕ್ಸಿಜನ್ ಸ್ಟೋರೇಜ್ ಘಟಕ
ಸಾಮಾನ್ಯವಾಗಿ ಅವಿದ್ಯಾವಂತರಾಗಿರುವ, ತಮ್ಮ ಅಭಿವೃದ್ಧಿಗಾಗಿಯೇ ಒಂದು ಸಹಕಾರ ಸಂಘವಿದೆಯೆಂದು ಕೂಡ ತಿಳಿಯದ ಮುಗ್ಧರು ಈ ಕೊರವರು. ಬಿಸಿಲು, ಮಳೆ, ಚಳಿ, ಗಾಳಿಗಳಿಗೆ ಅಂಜದ ಪ್ರಕೃತಿಯ ಮಕ್ಕಳಿವರು. ರೈತರಿಗಾಗಿಯೇ ಇರುವ, ಕೃಷಿ ಮತ್ತು ಕೃಷಿ ಮನೆತನಗಳನ್ನೇ ಅವಲಂಬಿಸಿರುವ, ಸ್ಥಳೀಯ ಸಂಪನ್ಮೂಲ ಬಳಸುವ, ಪರಿಸರವನ್ನೇ ಅವಲಂಬಿಸಿ, ಪರಿಸರಕ್ಕೆ ಹಾನಿ ಮಾಡದ, ಸಾಂಪ್ರದಾಯಿಕ ತಲತಲಾಂತರದ ಕುಲಕಸುಬು ಇಂದು ಆಧುನಿಕತೆಯಿಂದ ಅವಸಾನದತ್ತ ಸಾಗುತ್ತಿರುವುದು ದುಖಃದ ಸಂಗತಿ ಎಂದು ದೇವಿಕುಂಟೆ ಸಾಮಾಜಿಕ ಹೋರಾಟಗಾರ ಪವನ್ ಕಲ್ಯಾಣ್ ಹೇಳುತ್ತಾರೆ.