ಚಿಕ್ಕಬಳ್ಳಾಪುರ: ಪ್ರಸಿದ್ಧ ಯಾತ್ರಾಸ್ಥಳ ಕೈವಾರ ಕ್ಷೇತ್ರ ಸೇರಿದಂತೆ ಚಿಕ್ಕಬಳ್ಳಾಪುರ, ಗೌರಿಬಿದನೂರು ಸಾಯಿಬಾಬಾ ಮಂದಿರಗಳಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಗುರುಪುರ್ಣಿಮೆಯನ್ನು ಈ ಬಾರಿ ಯಾವುದೇ ಆಡಂಬರವಿಲ್ಲದೇ ಸರಳ ಪೂಜಾ ಕಾರ್ಯಗಳೊಂದಿಗೆ ನಡೆಸಲಾಯಿತು.
ಶ್ರೀಕ್ಷೇತ್ರ ಕೈವಾರದಲ್ಲಿ ಪ್ರತಿವರ್ಷವು ಸಂಗೀತೋತ್ಸವ, ಭಜನೆ ಸೇರಿದಂತೆ ಸಾಕಷ್ಟು ಪೂಜೆಗಳನ್ನು 50 ಸಾವಿರಕ್ಕೂ ಅಧಿಕ ಸಂಖ್ಯೆ ಭಕ್ತಾದಿಗಳ ಸಮ್ಮುಖದಲ್ಲಿ ನಡೆಸಲಾಗುತ್ತಿತ್ತು. ಗೌರಿಬಿದನೂರಿನ ಪ್ರತಿಷ್ಠಿತ ದೇವಸ್ಥಾನಗಳ ಪೈಕಿ ಒಂದಾದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜೆ ಹೋಮ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್ ತಡೆಗಟ್ಟಲು ಸಂಡೇ ಲಾಕ್ಡೌನ್ಗೆ ಸರ್ಕಾರ ಸೂಚಿಸಿದ್ದು ಜಿಲ್ಲೆಯಲ್ಲಿ ಸಾರ್ವಜನಿಕರ ಓಡಾಟ ಸಾಮಾನ್ಯವಾಗಿತ್ತು. ಈ ಮೂಲಕ ಸರ್ಕಾರದ ಆದೇಶವನ್ನು ಜನರು ಗಾಳಿಗೆ ತೂರಿದ್ದಾರೆ. ಕೆಲ ಅಂಗಡಿಗಳು ಬಂದ್ ಆಗಿದ್ದವು.
ಇನ್ನು, ವಿನಾಕಾರಣ ಅಡ್ಡಾಡುವ ಹಾಗೂ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ತೋರಿದ ಜನರಿಗೆ ಚಿಕ್ಕಬಳ್ಳಾಪುರ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.