ಚಿಕ್ಕಬಳ್ಳಾಪುರ: ಹಿಜಾಬ್ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕೈವಾಡವಿದೆ. ಅವರ ಸ್ಥಾನಮಾನಗಳಿಸಲು ಗಲಭೆಗಳನ್ನು ಶುರುಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯ ಚಿಂತಾಮಣಿಗೆ ಬಂದ ವೇಳೆ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಹಿಜಾಬ್ ಹೆಸರಿನಲ್ಲಿ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೇಸರಿ ಶಾಲು ಕೊಡುವ ಕೆಲಸಗಳು ನಡೆದಿವೆ. ಇವು ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿವೆ. ಖಾಸಗಿ ಶಾಲೆಗಳಲ್ಲಿ ನಡೆಯುತ್ತಿಲ್ಲ ಎಂದರು.
ರಾಜ್ಯದಲ್ಲಿ ಮಂತ್ರಿಗಳು, ಶಾಸಕರು ಹಾಗೂ ಮಾಜಿ ಸಚಿವರು ಶಾಸಕರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳು ಓದುತ್ತಿದ್ದಾರೆ. ಬಡ ಮಕ್ಕಳಿಗೆ ಎರಡು ಧರ್ಮಗಳ ಹೆಸರಿನಲ್ಲಿ ಕೆಲವು ಸಂಘಟನೆಗಳು ಅಮಾಯಕ ಮಕ್ಕಳಲ್ಲಿ ದ್ವೇಷದ ಭಾವನೆ ಮುಟ್ಟಿಸಿ ಅಮಾಯಕ ಮಕ್ಕಳ ಬಲಿ ಪಡೆದುಕೊಳ್ಳುತ್ತಿದ್ದಾರೆ.
ಗಲಭೆಗಳನ್ನು ಸೃಷ್ಟಿಸಿ ಶಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮಾಡುತ್ತಿಲ್ಲ. ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಇದರ ಪ್ರಮುಖ ಉದ್ದೇಶವೇ ರಾಜಕೀಯ ಪಕ್ಷಗಳ ಪ್ರಮುಖ ಪಾತ್ರವಿದೆ. ಆದರೆ, ಘಟನೆ ನಡೆದ ದಿನವೇ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೆ ಸಮಸ್ಯೆ ಬಗೆಹರಿಯುತ್ತದೆ.
ಈಗ 6 ರಾಷ್ಟ್ರಗಳಲ್ಲಿ ಚರ್ಚೆ ನಡೆಯುತ್ತಿದೆ. ಇದೇ ರೀತಿ ನಡೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಕೈಗಾರಿಗಳು ಬಂಡವಾಳ ಹಾಕುವ ಕಂಪನಿಗಳು ರಾಜ್ಯಕ್ಕೆ ಬರುವುದಿಲ್ಲ. ಈಗ ಮಕ್ಕಳಿಗೆ ಪುಸಲಾಯಿಸಿ ಅವರ ಮೇಲೆ ಕೇಸ್ ದಾಖಲಿಸಿ ಕೋರ್ಟ್ ಕಚೇರಿಯ ಮುಂದೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಇವರ ರಾಜಕೀಯದ ಸ್ಥಾನಮಾನಗಳು, ನಿರೀಕ್ಷೆಗಳ ಸಾಧಿಸಲು ಅಧಿಕಾರ ದುರಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜೆ. ಕೆ ಕೃಷ್ಣಾರೆಡ್ಡಿ ಅವರು ಪ್ರಾಮಾಣಿಕವಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಜೆ. ಕೆ ಕೃಷ್ಣಾರೆಡ್ಡಿ ತಾಲೂಕಿನಲ್ಲಿಯೇ ಜೆಡಿಎಸ್ ಪಕ್ಷದ ಮುಖಂಡರಾಗಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಯಾವುದೇ ರೀತಿಯ ಗೊಂದಲ ಸೃಷ್ಟಿ ಮಾಡಿದರೂ ಪ್ರಯೋಜನವಿಲ್ಲವೆಂದು ಹೇಳಿದರು.
ಓದಿ: ಹಿಜಾಬ್ ತೀರ್ಪು ನಮ್ಮ ವಿರುದ್ದವಾಗಿ ಬಂದರೆ ಕಾನೂನಾತ್ಮಕ ಹೋರಾಟ : ಸಿಎಫ್ಐ ರಾಜ್ಯಾಧ್ಯಕ್ಷ