ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಗೂಳೂರು ಮಾರ್ಗಾನುಕುಂಟೆ ವ್ಯಾಪ್ತಿಯ ಮಾಡಪ್ಪಲ್ಲಿ ಗ್ರಾಮದಲ್ಲಿ ಬೇಸಿಗೆಯ ರಣ ಬಿಸಿಲು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದೆ. ಕುಡಿಯುವ ನೀರಿನ ಸಮಸ್ಯೆ ಜತೆಯಲ್ಲೇ ರಾಸುಗಳ ಹಸಿರು ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಸಿರು ಮೇವು ಖರೀದಿ ಮಾಡಲಿಕ್ಕೆ ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲ. ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ 1,500 ಅಡಿಗಳಿಗೆ ಕುಸಿದಿದೆ. ಕುಡಿಯುವ ನೀರಿಗಾಗಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಬಂದಿದೆ. ಸಾಲ ಮಾಡಿ ಕೊಳವೆ ಬಾವಿ ಕೊರೆಯಿಸಿದರೂ ಸಿಗುತ್ತಿರುವ ನೀರು ಇಷ್ಟೇ ದಿನ ಬರುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ.
ಇದ್ದ ಅಲ್ಪ ಸ್ವಲ್ಪ ನೀರಿನಲ್ಲಿ ಮೇವಿನ ಬೆಳೆಗಳನ್ನಾದರೂ ಬೆಳೆದುಕೊಳ್ಳೋಣ ಅಂದರೆ ಇತ್ತೀಚೆಗೆ ಕೊಳವೆ ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿದೆ. ನಾವು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ರಾಸುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಮಾಡಪ್ಪಲ್ಲಿ ರೈತ ನರಸಿಂಹಮೂರ್ತಿ ಆತಂಕ ವ್ಯಕ್ತಪಡಿಸಿದರು.
ಮಾಡಪ್ಪಲ್ಲಿ ರೈತ ಗೋಪಾಲಪ್ಪ ಮಾತನಾಡಿ, ಕಳೆದ ವರ್ಷ ಭಾರೀ ಮಳೆ ಬಿದ್ದಿತ್ತು. ರಾಗಿ ಬೆಳೆ ಚೆನ್ನಾಗಿ ಆಗಿದ್ದರೂ ಹಸಿರು ಮೇವಿನ ಕೊರತೆ ನೀಗಿಸಲಿಕ್ಕೆ ಕಷ್ಟವಾಗುತ್ತಿದೆ. ಈ ಬೇಸಿಗೆಯಲ್ಲಿ ಹಸಿರು ಮೇವು ಕೂಡಲೇಬೇಕು. ಇಲ್ಲವಾದರೆ ಹಸುಗಳು ಸುಸ್ತಾಗುತ್ತವೆ. ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತದೆ. ಹಾಲಿನ ಉತ್ಪಾದನೆ ಕಡಿಮೆಯಾದರೆ ಮತ್ತೊಮ್ಮೆ ಉತ್ಪಾದನೆ ಹೆಚ್ಚು ಮಾಡಿಕೊಳ್ಳಬಹುದು. ರಾಸುಗಳು ಅನಾರೋಗ್ಯಕ್ಕೆ ಒಳಗಾದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಣ್ಣೀರಲ್ಲೇ ಕೈ ತೊಳೆಯುತ್ತಿದೆ ಕನಕಾಂಬರ ಹೂ ಬೆಳೆದಿದ್ದ ರೈತರ ಕುಟುಂಬ
ಕಳೆದ ವರ್ಷ ಹೊಲಗಳಲ್ಲಿ ಅವರೆ, ಮುಸುಕಿನ ಜೋಳದಂತಹ ಮೇವಿನ ಬೆಳೆಗಳು ಆಗಿದ್ದು ಕಡಿಮೆ. ಆದ್ದರಿಂದ ಉತ್ತಮವಾಗಿ ಮಳೆಯಾಗಿರುವ ಗೌರಿಬಿದನೂರು, ಹಿಂದೂಪುರ, ಚೇಳೂರು ಮುಂತಾದ ಕಡೆಗಳಿಗೆ ಹೋಗಿ ಹಸಿರು ಮೇವು ಖರೀದಿ ಮಾಡಿಕೊಂಡು ಬರುತ್ತಿದ್ದೇವೆ ಎಂದು ರೈತರು ತಿಳಿಸಿದರು.