ಚಿಕ್ಕಬಳ್ಳಾಪುರ : ಕೆ.ಎಸ್.ಆರ್.ಟಿ.ಸಿ ಬಸ್ ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೆ ತುತ್ತಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬಾಗೇಪಲ್ಲಿ ಘಟಕಕ್ಕೆ ಸೇರಿದ ಬಸ್ ಮಂಗಳವಾರ ಸಂಜೆ 5.30 ಗುಡಿಬಂಡೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ, ಅಮಾನಿಬೈರಸಾಗರ ಕೆರೆಯ ಕಟ್ಟೆಯ ಮೇಲೆ ಬಸ್‍ನ ಬೇರಿಂಗ್ ತುಂಡಾಗಿದೆ. ಇದನ್ನು ಅರಿತ ಚಾಲಕ ತನ್ನ ಸಮಯ ಪ್ರಜ್ಞೆಯಿಂದಾಗಿ ಕೆರೆಯೊಳಗೆ ಬೀಳುತ್ತಿದ್ದ ಬಸ್ಸನ್ನು ಎಡಭಾಗಕ್ಕೆ ತಿರುಗಿಸಿ ಬಸ್‍ನಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ.
ಅಧಿಕಾರಿಗಳು ಗುಡಿಬಂಡೆ ತಾಲ್ಲೂಕನ್ನು ನಿರ್ಲಕ್ಷಿಸುತ್ತಿದ್ದು ಈ ಭಾಗಕ್ಕೆ ಕಳುಹಿಸುವ ಬಸ್ಸುಗಳು ಬಹುತೇಕ ಹಳೆಯದ್ದಾಗಿವೆ. ಕೇವಲ ಕಾಟಾಚಾರಕ್ಕೆ ಇಂತಹ ಬಸ್ಸುಗಳನ್ನು ಕಳುಹಿಸುತ್ತಾರೆ ಎಂದು ಸಾರ್ವಜನಿಕರು ಕೆ.ಎಸ್.ಆರ್.ಟಿ.ಸಿ ಇಲಾಖೆಗೆ ಹಿಡಿ ಶಾಪ ಹಾಕಿದ್ದಾರೆ.