ಚಿಕ್ಕಬಳ್ಳಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮೃತರಾದ ಹಿನ್ನಲೆ, ಅಮ್ಮನ ಕೊರಗಿನಲ್ಲಿಯೇ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಜೋಡಿಗಾರ ಬಳಿ ನಡೆದಿದೆ.
ಸೈಯದ್ ಇರ್ಫಾನ್ (25) ಮೃತ ಯುವಕ. ಈತನ ತಾಯಿ ಅನಾರೋಗ್ಯದ ಹಿನ್ನಲೆ 3 ವರ್ಷಗಳ ಹಿಂದೆ ಮೃತರಾಗಿದ್ದರು. ನಿತ್ಯ ತಾಯಿ ನೆನೆದು ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಮಿಸ್‌ಯೂ ಅಮ್ಮ ಎಂದು ಪೋಸ್ಟ್ ಹಾಕಿಕೊಳ್ಳುತ್ತಿದ್ದ ಈತ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ತಂದೆ ವಿಕಲ ಚೇತನರಾಗಿದ್ದು, ತನ್ನ ಸಂಪಾದನೆಯಲ್ಲೇ ಅಕ್ಕನಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿದ್ದನು. ಈ ಎಲ್ಲದರ ನಡುವೆ ಅಮ್ಮನ ಅಗಲಿಕೆ ಈತನಿಗೆ ತೀವ್ರ ನೋವುಟಂಟು ಮಾಡಿದ್ದು, ದುಃಖ ತಾಳಲಾರದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಗೌರಿಬಿದನೂರು ನಗರ ಠಾಣೆಯ ಪಿಎಸ್ಐ ಪ್ರಸನ್ನ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.